ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಪ್ರತಿಧ್ವನಿ
ಓದುಗರ ಪತ್ರ
 

Letters- The Sunday Indian - Kannada

ಭಾರತದ ಏಕತೆಗೆ ಮಾರಕ

’ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬಾರದೇಕೆ?’ (ಅರಿಂದಮ್ ಚೌಧುರಿ) ಲೇಖನ ಆಡಳಿತಗಾರರ ಕಣ್ಣು ತೆರೆಸುವಂತಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ 19೪೭ರ ಸೆಪ್ಟೆಂಬರ್ 26ರಂದು ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿ ಮಾಡಿತು. ಕಾಶ್ಮೀರ ಮಹಾರಾಜರಾಗಿದ್ದ ಹರಿಸಿಂಗರ ಬೇಡಿಕೆಯಂತೆ ಸೈನ್ಯ ಪಾಕಿಸ್ತಾನ ದಾಳಿ ಹಿಮ್ಮೆಟ್ಟಿಸಲು ಧಾವಿಸಿ, ಜಯಮಾಲೆ ಕೊರಳಿಗೆ ಅಲಂಕರಿಸುವಷ್ಟರಲ್ಲಿ ಶಾಂತಿ ದೂತರೆಂದು ಹೆಸರು ಪಡೆಯಲು ಯುದ್ಧವಿರಾಮ ಸಾರಿದ ಆಗಿನ ಪ್ರಧಾನಿಯಾಗಿದ್ದ ನೆಹರೂ ಪ್ರಮಾದದಿಂದಾಗಿ ಕಾಶ್ಮೀರದ ಒಂದು ಭಾಗ ಆಜಾದ್ ಕಾಶ್ಮೀರದ ಹೆಸರಿನಲ್ಲಿ ಪಾಕಿಸ್ತಾನದ ನಿಯಂತ್ರಣದಲ್ಲಿ ಉಳಿಯಿತು. ಇಂದಿಗೂ ಅಲ್ಲಿ ಹಾಗೂ ಶ್ರೀನಗರ ಪ್ರದೇಶದಲ್ಲಿ ಪಾಕಿಸ್ತಾನ ಪ್ರತ್ಯೇಕತೆಯ ವಿಷಬೀಜ ಬಿತ್ತಿ ಕೋಮು ದಳ್ಳುರಿ ಹೊಗೆಯಾಡುವಂತೆ ಮಾಡಿದೆ. ಇದರ ಪರಿಣಾಮವಾಗಿ ಇಂದು ಕಾಶ್ಮೀರ ಅಗ್ನಿ ಕುಂಡವಾಗಿ ಧಗಧಗಿಸುತ್ತಿದೆ. ಈಗಾಗಲೇ ಸಾಕಷ್ಟು ಪ್ರತ್ಯೇಕತಾ ಭಾವನೆ ಬೆಳೆದು ಹುರಿಯತ್, ಲಷ್ಕರ್-ಇ-ತೊಯ್ಬಾದಂತಹ ರಾಷ್ಟ್ರ ದ್ರೋಹಿ ಶಕ್ತಿಗಳು ಬಲಗೊಂಡಿವೆ. ಚೀನಾ ಈಗಾಗಲೇ ಕಾಶ್ಮೀರದ ಲಡಾಖ್ ಮೇಲೆ ಕಣ್ಣಿಟ್ಟಿದ್ದು ತನ್ನ ಸೈನಿಕ ನೆಲೆ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಸಮಗ್ರ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಿದರೆ ಭಾರತದ ಏಕತೆಗೆ ಮಾರಕ. ನಮ್ಮ ಆಡಳಿತಗಾರರು ರಾಷ್ಟ್ರ ವಿದ್ರೋಹಿ ಚಟುವಟಿಕೆ ಸದೆಬಡಿಯಲು ಮುಂದಾಗುವುದು ಈಗಿನ ತುರ್ತು. ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಿದಲ್ಲಿ ಅಸ್ಸಾಂ, ಜಾರ್ಖಂಡ್, ನಾಗಾಲ್ಯಾಂಡ್, ಮಣಿಪುರ, ಮೊದಲಾದ ಸಣ್ಣ ರಾಜ್ಯಗಳು ಭಾರತದಿಂದ ಬೇರ್ಪಡಲು ಪ್ರಚೋದನೆ ನೀಡಿದಂತಾಗುತ್ತದೆ ಎಂಬ ಪ್ರಜ್ಞೆ ನಮಗಿರಬೇಕು.

ರೇ.ಚ. ರೇವಡಿಗಾರ
ಸಿಂಧಗಿ

ಏಕೆ ನೀಡಬಾರದು?

ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬಾರದೇಕೆ? ಇದು ಸದ್ಯಕ್ಕೆ ಪ್ರತಿಯೊಬ್ಬ ಭಾರತೀಯನಿಗೂ ಕಾಡುವ ಪ್ರಶ್ನೆ. ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದ ಕಾಶ್ಮೀರ ಇಂದು ಧರ್ಮ-ಜಾತಿಯ ರುದ್ರ ನರ್ತನಕ್ಕೆ ಸಿಕ್ಕು ನಲುಗುತ್ತಿದೆ. ಮತಬ್ಯಾಂಕ್ ರಾಜಕಾರಣಕ್ಕೆ ಮತ್ತೊಂದು ನಿದರ್ಶನವೇ ಅಮರನಾಥ ಜಮೀನು ವಿವಾದ. ಇಲ್ಲಿ ಯಾವ ಪಕ್ಷಗಳನ್ನು ಬೊಟ್ಟು ಮಾಡಿ ತೋರಿಸಿದರೂ ಅದು ಮೂರ್ಖತನವಾದೀತು. ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ವಿವಾದವನ್ನು ಬಂಡವಾಳವಾಗಿಸುತ್ತಿವೆ. ಇಷ್ಟೆಲ್ಲಾ ಸಮಸ್ಯೆಗಳಿಗೆ ಮುಖ್ಯ ಕಾರಣ ಆ ರಾಜ್ಯದ ರಾಜ್ಯಪಾಲರ ’ಸಣ್ಣತನ’ ಎಂಬುದನ್ನು ನಾವು ತಿಳಿಯಬೇಕು. ಸದ್ಯಕ್ಕಿರುವ ಪರಿಹಾರವೊಂದೇ. ಕಾಶ್ಮೀರಕ್ಕೆ ಸ್ವಾಯತ್ತತೆ ನೀಡಬೇಕು.

ಇರ್ಷಾದ್ ಎಂ. ವೇಣೂರು
ಉಜಿರೆ

ಭಾವೈಕ್ಯತೆಗೆ ಧಕ್ಕೆ

ಅಮರನಾಥ ಭೂ ವಿವಾದಕ್ಕೆ ಸಂಬಂಧಿಸಿದಂತೆ ಹೆಚ್ಚುತ್ತಿರುವ ಕಾಶ್ಮೀರ ಸಮಸ್ಯೆಯ ಕುರಿತು ’ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬಾರದೇಕೆ?’ ಬರಹ ಉತ್ತಮವಾಗಿ ಮೂಡಿಬಂದಿದೆ. ಕಾಶ್ಮೀರದ ಸ್ಥಿತಿ-ಗತಿಯ ಸಂಪೂರ್ಣ ಮಾಹಿತಿ ಒದಗಿಸಿತು. ಕಾಶ್ಮೀರದ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರ ಸರ್ಕಾರ ಹಣದುಬ್ಬರ, ಮಿತ್ರ ಪಕ್ಷಗಳ ಬೇಡಿಕೆ ಪೂರೈಕೆ, ಅಣು ಒಪ್ಪಂದ ಇವುಗಳಲ್ಲಿ ಮಗ್ನವಾಗಿರುವುದು ಖಂಡಿತ ಮೆಚ್ಚತಕ್ಕದ್ದಲ್ಲ. ಅಮರನಾಥ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಪ್ರಾರಂಭವಾದ ಪ್ರತಿಭಟನೆ, ಎರಡು ಕೋಮಿನ ನಡುವೆ ಉಂಟಾಗಿರುವ ಸಂಘರ್ಷದಿಂದ ಜಮ್ಮು-ಕಾಶ್ಮೀರ ಇಬ್ಭಾಗವಾಗುವತ್ತ ದಾಪುಗಾಲಿಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತ್ಯೇಕತಾವಾದಿಗಳ ವಿಚಾರಗಳಿಗೆ ಮಣಿಯುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಇದನ್ನು ಗಮನಿಸಿದಾಗ 19೮9ಕ್ಕೆ ಕಾಶ್ಮೀರ ಮರಳುತ್ತಿದೆಯೇನೋ ಎಂದನಿಸದೆ ಇರಲಾರದು. ಅರುಂಧತಿ ರಾಯ್ ಅವರು ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಿ ಎಂಬ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಾಗ ಸರ್ಕಾರ ಇದಕ್ಕೆ ಸ್ಪಂದಿಸದೆ ಇರಲು ಅನೇಕ ಕಾರಣಗಳಿವೆ. ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಿದರೆ ಅಸ್ಸಾಂ, ನಾಗಾಲ್ಯಾಂಡ್‌ನಂತಹ ಗಡಿ ರಾಜ್ಯಗಳು ತಮಗೂ ಸ್ವಾತಂತ್ರ್ಯ ನೀಡಿ ಎಂದು ಕೇಳಲಾರಂಭಿಸಿದರೆ ಇಡೀ ದೇಶದ ಪ್ರಜಾಪ್ರಭುತ್ವ ರಚನೆಗೆ ಧಕ್ಕೆ ಉಂಟಾಗಿ, ದೇಶದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಆದ್ದರಿಂದ ಕಾಶ್ಮೀರವನ್ನು ಹತೋಟಿಯಲ್ಲಿಟ್ಟುಕೊಳ್ಳುವುದೇ ಸೂಕ್ತ. ಇಲ್ಲವೆಂದಾದಲ್ಲಿ ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ.

ಎಚ್.ಎಂ. ಕರುಣೋದಯ 
ತುಮಕೂರು

ಹಾರುವ ಹಕ್ಕಿಯನ್ನು ಹಾರಿಸಿ

’ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬಾರದೇಕೆ?’ ಬೇಕು-ಬೇಡಗಳ, ಸ್ವಾತಂತ್ರ್ಯ- ನಿರ್ಬಂಧ, ರಾಜಕೀಯ-ಸಾಮಾಜಿಕ ನಡೆಗಳ ಅರ್ಥಪೂರ್ಣ ವಿಮರ್ಶೆಯನ್ನು ತೆರೆದಿಟ್ಟಿದೆ. ಧಾರ್ಮಿಕತೆಯ ಭಾವನೆಗಳಿಗೆ ಹೆಚ್ಚಿನ ಮಹತ್ವ ನೀಡಿರುವ ಕಾಶ್ಮೀರಿಗಳಿಗೆ ಯಾರು ಏನು ಮಾಡಲು ಸಾಧ್ಯ? ಕೋಮು ದಳ್ಳುರಿ, ರಾಜಕೀಯ ನಾಯಕರ ಕಪಟ ತಂತ್ರಗಳಿಗೆ ಬಲಿಯಾಗಿರುವ ಕಾಶ್ಮೀರವನ್ನು ಬಲವಂತದಿಂದ ಹಿಡಿದಿಟ್ಟುಕೊಳ್ಳಲು ಸೇನಾಡಳಿತ ಜಾರಿಗೊಳಿಸಿದರೆ, ಮಾನವ ಹಕ್ಕುಗಳ ತೀವ್ರ ಉಲ್ಲಂಘನೆಯಾಗುವುದಿಲ್ಲವೇ? ಚಿಂತನೆಗೆ ಹಚ್ಚಿದ ಬರಹವಿದು.

ಎಚ್. ಆನಂದ್ ಕುಮಾರ್
ಚಿತ್ರದುರ್ಗ

ಧೋರಣೆ ಬದಲಿಸಿಕೊಳ್ಳಬೇಕಾಗಿದೆ

ನೇಪಾಳದ ರಾಜಕೀಯ ಬದಲಾವಣೆ ಕುರಿತು ’ಭಾರತದೊಂದಿಗಿನ ಮೈತ್ರಿ ಮುಗಿಯಿತೇ?’ (ಮಾಯಾಂಕ್ ಸಿಂಗ್ ಮತ್ತು ಸೌರಭ್ ಕುಮಾರ್ ಶಾಹಿ) ಲೇಖನ ಚಿಂತನಾರ್ಹ. ಒಂದು ದಶಕಗಳ ಕಾಲ ರಾಜಾಡಳಿತದ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದ ಮಾವೋವಾದಿ ಕಮ್ಯುನಿಸ್ಟ್ ಪಕ್ಷ ಕೆಲವು ತಿಂಗಳ ಹಿಂದೆ ನಡೆದ ಸಂಸತ್ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಸರ್ಕಾರ ರಚಿಸಲು ಅಗತ್ಯ ಬೆಂಬಲವನ್ನು ’ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಲ್ ಯೂನಿಫೈಡ್ ಮಾರ್ಕ್ಸ್‌ಸಿಸ್ಟ್ ಲೆನಿನಿಸ್ಟ್’ ಮತ್ತು ’ಮಧೇಶಿ ಜನಾಧಿಕಾರ್ ಫೋರಂ’ ನೀಡಿದ ಹಿನ್ನೆಲೆಯಲ್ಲಿ ಪ್ರಚಂಡ ಅವರು ಸಂವಿಧಾನ ಸಭೆಯಲ್ಲಿ ಹೆಚ್ಚು ಮತಗಳನ್ನು ಪಡೆದು ಪ್ರಧಾನಿಯಾದರು. ಆದರೆ ನೇಪಾಳಿ ಕಾಂಗ್ರೆಸ್ ನಾಯಕರು ಅನುಭವದಿಂದ ಪಾಠ ಕಲಿತಂತೆ ಕಾಣುತ್ತಿಲ್ಲ. ಪ್ರಚಂಡ ಅವರ ಸರ್ಕಾರ ಮುಂದಿನ ಚುನಾವಣೆವರೆಗೆ 2 ವರ್ಷಗಳ ಅಧಿಕಾರ ನಡೆಸಲಿದೆ. ಅಷ್ಟರಲ್ಲಿ ಹೊಸ ಸಂವಿಧಾನ ರಚಿಸಬೇಕಿದೆ. ಆ ನಂತರ ಹೊಸ ಸಂವಿಧಾನದ ಅನ್ವಯ ಚುನಾವಣೆ ನಡೆಯಲಿದೆ. ಅವರು ಹೇಗೆ ಆಡಳಿತ ನಡೆಸಲಿದ್ದಾರೆ ಎನ್ನುವುದರ ಮೇಲೆ ಅವರ ಪಕ್ಷದ ಭವಿಷ್ಯ ಅಡಗಿದೆ. ಬಂದೂಕು ಹಿಡಿದಿದ್ದ ತಮ್ಮ ಪಕ್ಷದ ಗೆರಿಲ್ಲಾ ಪಡೆಗೆ ಉದ್ಯೋಗ ನೀಡಬೇಕಾದ ಕಠಿಣ ಜವಾಬ್ದಾರಿ ಪ್ರಚಂಡ ಅವರ ಮೇಲಿದೆ. ಅನಿವಾರ್ಯವಾಗಿ ಅವರನ್ನು ಸೇನೆಗೆ ಸೇರಿಸಿಕೊಳ್ಳಬೇಕಾಗುತ್ತದೆ. ಅರಸೊತ್ತಿಗೆ ಕಾಲದ ಭಾರತ-ನೇಪಾಳ ಮೈತ್ರಿ ಒಪ್ಪಂದ ರದ್ದು ಮಾಡಬೇಕೆಂದು ಪ್ರಚಂಡ ಅವರ ಪಕ್ಷ ಒತ್ತಾಯಿಸುತ್ತಾ ಬಂದಿದೆ. ನೇಪಾಳವನ್ನು ಭಾರತ ಅಡಿಯಾಳಂತೆ ನಡೆಸಿಕೊಳ್ಳಲು ಈ ಒಪ್ಪಂದ ಅವಕಾಶ ಮಾಡಿಕೊಟ್ಟಿದೆ ಎಂಬುದು ಮಾವೋವಾದಿಗಳ ವಾದ. ಭಾರತವೂ ದೊಡ್ಡಣ್ಣನ ಧೋರಣೆ ಅನುಸರಿಸದೆ ಮೈತ್ರಿಗೆ ಮುಂದಾಗಬೇಕು. ಮೈತ್ರಿ ಸಾಧಿಸಲು ಸಾಧ್ಯವಾಗದಿದ್ದರೆ ಸೆರಗಿನಲ್ಲಿ ಬೆಂಕಿ ಕೆಂಡ ಕಟ್ಟಿಕೊಂಡಂತೆಯೇ ಆಗುತ್ತದೆ.

ಎಚ್.ಎನ್. ನಾಗರಾಜ್
ಬೆಂಗಳೂರು

ಇದು ಸಹಜ

’ಹಣ್ಣೆಲೆಗಳು ಉದುರುವ ಸಮಯ ಸಮೀಪಿಸಿದಾಗ’ (ಸತೀಶ್ ಚಪ್ಪರಿಕೆ) ಲೇಖನ ಉತ್ತಮವಾಗಿತ್ತು. ಇದು ಪ್ರಕೃತಿ ಸಹಜ ನಿಯಮ. ವಯಸ್ಸು ಒಂದೆಡೆ ಹೆಚ್ಚುತ್ತಾ ಹೋದಂತೆ ಸಾಮರ್ಥ್ಯ ಕ್ಷೀಣಗೊಳ್ಳುತ್ತಾ ಸಾಗುತ್ತದೆ. ಕ್ರಿಕೆಟ್ ಲೋಕ ಇದರಿಂದ ಹೊರತೇನೂ ಅಲ್ಲ. ಹಳೆಯ ಮುಖಗಳು ಮಾಯವಾಗುತ್ತಾ ಹೊಸಬರ ಪ್ರವೇಶವಾಗುತ್ತದೆ. ಭವಿಷ್ಯದಲ್ಲಿ ಅವರೂ ದಾಖಲೆ ಮಾಡುತ್ತಾ ಸಾಗುತ್ತಾರೆ. ಮುಂದೆ ಅವರೂ ಉದುರಲೇ ಬೇಕಲ್ಲವೇ?

ವಿ. ಹರೀಶ್
ಬೆಂಗಳೂರು

ವೇದಿಕೆ ಅಗತ್ಯ

’ಅಭಿನವ್ ಪದಕ ಸಾಧನೆ, ಅದರಲ್ಲಿ ದೇಶದ ಪಾಲೇನೂ ಇಲ್ಲ’ (ಅರಿಂದಮ್ ಚೌಧುರಿ) ಸಂಪಾದಕೀಯ ಚಿಂತನೆಗೆ ಹಚ್ಚಿತು. ಏಕೆಂದರೆ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್  ಚಿನ್ನದ ಪದಕ ಪಡೆದದ್ದು ಅವರ ಪರಿಶ್ರಮದಿಂದಲೇ ಹೊರತು ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಕಾರದಿಂದಲ್ಲ. ರಾಜಕೀಯ ಮುಷ್ಟಿಯಲ್ಲಿರುವ ಕ್ರೀಡಾ ಪ್ರಾಧಿಕಾರದಲ್ಲಿ ಭ್ರಷ್ಟಾಚಾರವೇ ತಾಂಡವವಾಡುತ್ತಿದೆ. ಇದರಿಂದ ದೇಶದ ಪ್ರತಿಭಾವಂತ ಕ್ರೀಡಾಳುಗಳು ಕಣ್ಮರೆಯಾಗುತ್ತಿದ್ದಾರೆ. ವೇದಿಕೆ ಇದ್ದರೆ ಮಾತ್ರ ಪ್ರತಿಭೆಯೊಂದು ಅರಳಬಹುದು. ಕ್ರಿಕೆಟ್‌ಗೆ ದೊರೆಯುತ್ತಿರುವ ಪ್ರೋತ್ಸಾಹ ಎಲ್ಲಾ ಕ್ರೀಡೆಗಳಿಗೆ ದೊರೆಯಬೇಕಾಗಿದೆ.

ಶಂಶೀರ್ ಬುಡೋಳಿ
ಬಂಟ್ವಾಳ

ನಾಯಕತ್ವದ ಅರ್ಥ ತಿಳಿಯಲಿ

’ಮಕ್ಕಳಿಗೆ ಪಟ್ಟ ಕಟ್ಟುವ ಪ್ರಜಾಪ್ರಭುತ್ವ!’ (ಪಥಿಕೃತ್ ಪಾಯ್ನೆ) ಲೇಖನ ಉತ್ತಮ ಸಲಹೆಗಳನ್ನು ನೀಡಿತು. ಕುಟುಂಬ ರಾಜಕಾರಣವನ್ನೇ ಮೈಗೂಡಿಸಿಕೊಂಡಿರುವ ಭಾರತಕ್ಕೆ ಬ್ರಿಟನ್ ಪಾಠ ಅಗತ್ಯ. ಬ್ರಿಟನ್ ರಾಜಮನೆತನದ ಸದಸ್ಯರು ನಡೆ-ನುಡಿ, ವ್ಯಕ್ತಿತ್ವದ ಮೂಲಕ ಜನರಿಗೆ ಮಾದರಿಯಾಗಿದ್ದಾರೆ. ಅಫ್ಘಾನಿಸ್ತಾನದ ಯುದ್ಧಭೂಮಿಗೆ ತೆರಳಿ ಅಲ್ಲಿನ ಸೈನಿಕರ ಜೊತೆ ಮಾತುಕತೆ ನಡೆಸಿ ಮರಳಿ ಬ್ರಿಟನ್‌ಗೆ ಬಂದಾಗ ಹ್ಯಾರಿ, "ನಾನೇನೂ ಹೀರೋ ಅಲ್ಲ, ನಿಜವಾದ ಹೀರೋಗಳು ಯುದ್ಧಭೂಮಿಯಲ್ಲಿ ಹೋರಾಡುವವರು" ಎಂದು ಉದ್ಗಾರ ತೆಗೆದರು. ವಂಶಪಾರಂಪರ್ಯ ರಾಜಕಾರಣಕ್ಕೆ ಉತ್ತಮ ನಿದರ್ಶನವಾಗಿರುವ ದೇವೇಗೌಡ, ಕರುಣಾನಿಧಿ ಅವರಂತಹ ಭಾರತದ ರಾಜಕೀಯ ನಾಯಕರು ಹ್ಯಾರಿ ಮತ್ತು ವಿಲಿಯಂರಂತೆ ಯುದ್ಧಭೂಮಿಗೆ ತೆರಳಿ ಅಲ್ಲಿನ ಸೈನಿಕರ ಜೊತೆ ಕುಶಲೋಪರಿ ವಿಚಾರಿಸುವರೇ? ಇವರೆಲ್ಲ ಅಧಿಕಾರ ಇದ್ದಾಗ ತಮ್ಮ ಮಕ್ಕಳ ಭವಿಷ್ಯಕ್ಕೆ ’ಅಗತ್ಯ’ವಾಗುವ ಸತ್ಕಾರ್ಯಗಳನ್ನು ಮಾಡುತ್ತಾರೆ. ಭಾರತದ ನಾಯಕರು ನಾಯಕತ್ವದ ನಿಜವಾದ ಅರ್ಥ ತಿಳಿದು ಅದನ್ನು ಮೈಗೂಡಿಸಿಕೊಳ್ಳಬೇಕು. 

ಪಿ.ವಿ. ಪಾಟೀಲ್
ಹುಬ್ಬಳ್ಳಿ

ಸಂಸ್ಕೃತಿಗಳ ನೆಲೆವೀಡು

 ಭಾರತ ಸಂಪ್ರದಾಯ-ಸಂಸ್ಕೃತಿಗಳ ನೆಲೆವೀಡು. ಅಂತಹುದ್ದರಲ್ಲಿ ಮೊನ್ನೆ ಬೆಂಗಳೂರಿನಲ್ಲಿ ನಡೆದ ’ರೇವ್ ಪಾರ್ಟಿ’ ನಾವು ಎತ್ತ ಸಾಗುತ್ತಿದ್ದೇವೆ ಎಂಬ ಪ್ರಶ್ನೆ ಹುಟ್ಟುಹಾಕುತ್ತದೆ. ಇಂತಹ ಅನೇಕ ಪಾರ್ಟಿಗಳು ನಡೆಯುತ್ತಿದ್ದರೂ ಇವುಗಳ ತಡೆಗೆ ಯಾವುದೇ ನೀತಿ ಜಾರಿಗೆ ಬಂದಿಲ್ಲದಿರುವುದು ಖೇದಕರ. ‘ಸಿನೆಸ್ತೇಸಿಯಾ ಗುಂಗಲ್ಲಿ ಸಿಲಿಕಾನ್ ಸಿಟಿ’ (ಚಿತ್ರಾ ಕರ್ಕೇರಾ) ಲೇಖನ ಈ ನಿಟ್ಟಿನಲ್ಲಿ ಉತ್ತಮ ಓದಿಗೆ ಪೂರಕವಾಯಿತು. 

ನಾಗರಾಜ ಬಣಕಾರ್
ಬಳ್ಳಾರಿ

ಉತ್ತಮ ಲೇಖನ

 ’ಮಿಲನದ ಹುಡುಗಿಯ ಮಧುರ ಮಾತು’ (ಡಿ.ಎಸ್. ಶ್ರೀಕಲಾ) ಲೇಖನ ಚೆನ್ನಾಗಿತ್ತು. ನಾನು ಪಾರ್ವತಿ ಮೆನನ್ ಅಭಿನಯದ ಚಿತ್ರಗಳನ್ನು ನೋಡಿದ್ದೇನೆ. ಕನ್ನಡ ಚಿತ್ರರಂಗದಲ್ಲಿ ಆಕೆಯ ಭವಿಷ್ಯ ಇನ್ನಷ್ಟು ಬೆಳೆಯಲಿದೆ. ಕಾಯಬೇಕಷ್ಟೆ.

ಶಿವಕುಮಾರ್, ಜಪಾನ್
ಇ-ಮೇಲ್ ಮೂಲಕ

ಬಹುಮಾನಿತ ಪತ್ರಗಳು

ಸ್ವಾತಂತ್ರ್ಯಕ್ಕೂ ಮಿತಿ ಇದೆ

Letters- The Sunday Indian - Kannada

ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ಈಗ ಕಾಶ್ಮೀರಕ್ಕೆ ಹೆಚ್ಚಿನ ಸ್ವಾಯತ್ತತೆಯೇ ಇದೆ. ಇದಕ್ಕೆ ಒಂದು ಉದಾಹರಣೆ ಎಂದರೆ, ಬೇರೆ ಯಾವುದೇ ಭಾರತೀಯ ಕಾಶ್ಮೀರದಲ್ಲಿ ಆಸ್ತಿ ಹೊಂದಲು ಸಾಧ್ಯವಿಲ್ಲ. ಇಂತಹ ಹಲವು ಅಂಶಗಳನ್ನು ಗಮನಿಸಿದಾಗ ಸಂಪೂರ್ಣ ಸ್ವಾಯತ್ತತೆ ಪಡೆಯುವತ್ತಲೇ ಅದು ಸಾಗುತ್ತಿದೆ ಅಥವಾ ಇದನ್ನೇ ಪ್ರತ್ಯೇಕ ರಾಷ್ಟ್ರವಾಗುವುದರತ್ತ ಹೊರಟಿರುವುದು ಎನ್ನಬಹುದೇ? ಹಾಗಿದ್ದಲ್ಲಿ ಸ್ವಾತಂತ್ರ್ಯ ನೀಡಿ ಎಂದರೆ ಅದರ ಅರ್ಥವೇನು? ಇದರರ್ಥ ಇಷ್ಟೆ, ಅವರು ತಮ್ಮದೇ ಸೇನೆಯನ್ನು ರೂಪಿಸಿಕೊಳ್ಳಬೇಕು, ಪ್ರತ್ಯೇಕ ವಿಮಾನ ನಿಲ್ದಾಣಗಳು, ಭಾರತಕ್ಕೆ ವಿಮಾನದಲ್ಲಿ ಬರಬೇಕೆಂದರೆ ಪ್ರತ್ಯೇಕ ವಲಸೆ ಕ್ರಮಗಳು, ಪಾಸ್‌ಪೋರ್ಟ್ ಹೊಂದುವುದು... ಇವೆಲ್ಲಾ ಆಗಬೇಕೆಂದರೆ ಕಾಶ್ಮೀರ ಆರ್ಥಿಕ ಮತ್ತು ತಾಂತ್ರಿಕವಾಗಿ ಗಟ್ಟಿಯಾದ ಹಿನ್ನೆಲೆ ಹೊಂದಿರಬೇಕಾಗುತ್ತದೆ. ಸ್ವಾತಂತ್ರ್ಯ ಪಡೆವ ಪ್ರಯೋಗ ನಡೆಸಬೇಕೆಂಬ ಕಾಶ್ಮೀರಿಗಳ ಇಚ್ಛೆಯನ್ನು ನಾವು ಗೌರವಿಸುತ್ತೇವೆ. ಆದರೆ ಸ್ವಾತಂತ್ರ್ಯ ಎನ್ನುವುದು ಒಂದು ಪರಿಮಿತಿಯನ್ನು ಮೀರಬಾರದು ಎಂಬ ವಿಚಾರವನ್ನು ಕಾಶ್ಮೀರಿಗಳು ಅರ್ಥೈಸಿಕೊಳ್ಳಬೇಕು. 

ಸುಬ್ರತಾ ರಾಯ್
ಕೋಲ್ಕತ್ತಾ

ಇಲ್ಲಿರುವುದು ಮಾನವೀಯ ಮುಖ

ಮಾಧ್ಯಮಗಳು ಸ್ವತಂತ್ರ ಕಾಶ್ಮೀರದ ಕುರಿತ ವಿಷಯ ಎತ್ತಿದ ಹಿನ್ನೆಲೆಯಲ್ಲಿ ಮತ್ತೆ ಆ ಕುರಿತ ತೀವ್ರ ಚರ್ಚೆ ಆರಂಭಗೊಂಡಿದೆ. ಆದರೆ ಕಾಶ್ಮೀರಕ್ಕೆ ಹೇಗೆ ಭಾರತದಿಂದ ಸ್ವಾತಂತ್ರ್ಯ ಲಭಿಸಬೇಕೋ ಅದೇ ರೀತಿ ಭಾರತಕ್ಕೆ ಕಾಶ್ಮೀರದಿಂದ ಸ್ವಾತಂತ್ರ್ಯ ದೊರಕಬೇಕು ಎಂಬುದು ಸತ್ಯಕ್ಕೆ ದೂರಾದ ಮಾತು. ಇದು ಕೇವಲ ಬೆರಣಿಕೆಯಷ್ಟು ಮಂದಿಯ ಅಭಿಪ್ರಾಯ ಮಾತ್ರ. ಭಾರತಕ್ಕೆ ಕಾಶ್ಮೀರದಿಂದ ಮುಕ್ತಿ ಹೊಂದುವ ಅಗತ್ಯವೇ ಇಲ್ಲ. ಬದಲಿಗೆ ಅದಕ್ಕೆ ಬೇಕಾಗಿರುವುದು ಕಾಶ್ಮೀರದ ಅಭಿವೃದ್ಧಿ ಮತ್ತು ಶಾಂತಿ. ಅರಿಂದಮ್ ಚೌಧುರಿ ಮಾತುಗಳು ತೀವ್ರಗಾಮಿ ಚಿಂತನೆ ಮತ್ತು ಅದಕ್ಕೆ ಅವರು ಸೂಕ್ತ ಕಾರಣಗಳನ್ನೂ ಒದಗಿಸಿದ್ದಾರೆ. ಕಾಶ್ಮೀರಿಗಳಿಗಾಗಿ ಆರು ದಶಕಗಳ ಹಿಂದೆ ಒಂದು ಕಾನೂನು ತರುವ ವಾಗ್ದಾನ ಮಾಡಲಾಯಿತು. ಆದರೆ ಇಲ್ಲಿಯವರೆಗೆ ಆ ಕುರಿತು ಯಾರೂ ಚಕಾರವೆತ್ತಿಲ್ಲ. ಹಿಮಕಣಿವೆಯಲ್ಲಿ ಬೆಂಕಿ ಉರಿಯುತ್ತಲೇ ಇದೆ. ಇನ್ನೂ ದಶಕಗಳವರೆಗೆ ಮುಂದುವರಿಯುತ್ತಲೇ ಇರುತ್ತದೆ. ಇದರ ಫಲಿತಾಂಶ ಏನು ಎಂಬುದನ್ನು ಕಾಶ್ಮೀರಿಗಳು ನಿರ್ಧರಿಸಬೇಕೇ ಹೊರತು ಭಾರತ ಹಾಗೂ ಪಾಕ್‌ನ ರಾಜಕಾರಣಿಗಳು ಅಥವಾ ಯೋಧರಲ್ಲ. ಯಾವುದೋ ಕೋಮನ್ನು ಗಮನದಲ್ಲಿಟ್ಟುಕೊಂಡು ಇದನ್ನು ಹೇಳುತ್ತಿಲ್ಲ, ಬದಲಿಗೆ ಇಲ್ಲಿರುವುದು ಕೇವಲ ಮಾನವೀಯತೆ. ದೇಶದ ಯಾವುದೋ ಭಾಗವನ್ನು ಆಕ್ರಮಿಸಿಕೊಳ್ಳುವುದಕ್ಕಿಂತ ಪ್ರಜೆಗಳ ಬದುಕನ್ನು ರೂಪಿಸುವುದು ಭಾರತದ ಉದಾತ್ತ ಕಲ್ಪನೆ.

. ಹಿತೇಶ್
ಸೂರತ್

ಯೋಚನೆಗೆ ಸಕಾಲ

ಕಾಶ್ಮೀರದ ಮಟ್ಟಿಗೆ ಹೇಳುವುದಾದರೆ ಪ್ರತ್ಯೇಕತೆ ಎನ್ನುವುದು ಈಗ ಉಗ್ರವಾದಿಗಳ ಬಂದೂಕಿನಿಂದ ಹೊರಬರುತ್ತಿರುವ ಸದ್ದಲ್ಲ. ಬದಲಿಗೆ ಸ್ವಾತಂತ್ರ್ಯ ಬೇಕೆಂಬ ಘೋಷವಾಕ್ಯ ಕೇಳಿಬರುತ್ತಿರುವುದು ಸಾರ್ವಜನಿಕರಿಂದ. ಕಾಶ್ಮೀರ ಈಗ ತನಗೆ ಸ್ವಾತಂತ್ರ್ಯ ಬೇಕು ಎಂದು ನಡೆಸುತ್ತಿರುವ ಚಳವಳಿಯನ್ನು ಸರಾಗವಾಗಿ ತಳ್ಳಿ ಹಾಕುವುದು ಸರಿಯೆ ಎಂದು ಭಾರತ ಸರ್ಕಾರ ಪ್ರಶ್ನಿಸಿಕೊಳ್ಳಬೇಕಿದೆ. ಕಾಶ್ಮೀರದ ಅಭಿಪ್ರಾಯವಂತೂ ಈಗ ಸ್ಪಷ್ಟ: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಲಭಿಸಬೇಕು. ಹಾಗಿದ್ದಲ್ಲಿ ಕಾಶ್ಮೀರವನ್ನು ಪ್ರತ್ಯೇಕಿಸಲು ಭಾರತಕ್ಕೆ ಇದು ಸೂಕ್ತ ಸಮಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕೆಲವು ಚಿಂತಕರ ಅಭಿಪ್ರಾಯದಂತೆ ಹಾಗೆ ಮಾಡಿದ್ದೇ ಆದಲ್ಲಿ ಭಾರತದ ಭೌಗೋಳಿಕ ಸೌಂದರ್ಯ ಕುಗ್ಗುವುದಲ್ಲದೆ, ಬಹು ಸಂಸ್ಕೃತಿಯ ಸಮಾಜ ಎಂಬ ಕಲ್ಪನೆಯೇ ಇಲ್ಲವಾಗುತ್ತದೆ. ಆದರೆ ಇವರು ಅರ್ಥಮಾಡಿಕೊಳ್ಳಬೇಕಾದ ವಿಚಾರವೊಂದಿದೆ. ಕಾಶ್ಮೀರ ಏನನ್ನು ಬಯಸುತ್ತಿದೆಯೋ ಅದು ಮೂಲಭೂತವಾಗಿ ಬಹಳ ಭಿನ್ನವಾಗಿರುವಂತಹುದು. ಸ್ವಾತಂತ್ರ್ಯ ಬೇಕೆಂದು ಬಂದೂಕಿನ ಮೊನೆಯಿಂದ ಬಿಕ್ಕುತ್ತಿಲ್ಲ, ಪ್ರತಿಭಟನೆಯ ಮೊನಚಿನಿಂದ ‘ಅಸಮ್ಮತಿ’ ವ್ಯಕ್ತಪಡಿಸಲಾಗುತ್ತಿದೆ. ಭಾರತ ರೂಪುಗೊಂಡಿರುವುದೇ ‘ಅಸಮ್ಮತಿ’ ಎಂಬ ತಳಹದಿಯ ಮೇಲೆ. ಹಾಗಾಗಿ ಕಾಶ್ಮೀರ ವಿಷಯದ ಕುರಿತಾಗಿ ಭಾರತ ಮತ್ತೊಮ್ಮೆ ಯೋಚಿಸಲು ಇದು ಸೂಕ್ತ ಸಮಯ.

ಎ. ನೀಲು
ಬೆಂಗಳೂರು

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .