|
ಆತನಿಗೆ ಏನೇ ಪ್ರಶ್ನೆ ಕೇಳಿದರೂ ಸಣ್ಣಗೆ ನಗುತ್ತಿದ್ದ.
ಆ ನಗುವಿನಲ್ಲಿ ವಿಷಾದವಿತ್ತೋ,
ಭಯವಿತ್ತೋ, ತಣ್ಣನೆಯ
ಆಕ್ರೋಶವಿತ್ತೋ ನನಗೆ ಗುರುತಿಸಲಾಗಲಿಲ್ಲ. ತನ್ನವರು
ಎನ್ನುವವರು ಈಗ ಆತನಿಗೆ ಯಾರೂ ಇಲ್ಲ.
ತಲೆಯ ಮೇಲಿದ್ದ ಹಾಳೆಟೊಪ್ಪಿ ಮತ್ತು ಅದರ ಮೇಲೆ ಹೊದ್ದ
ಕಂಬಳಿಕೊಪ್ಪೆ ಇವಿಷ್ಟೇ ಈಗವನ ಆಸ್ತಿ.
ಅವನ
ಹಿನ್ನೆಲೆಯಲ್ಲಿ ವರ್ಷದ ಹಿಂದೆ ನಡೆದ ಘೋರ ದುರಂತಕ್ಕೆ ಸಾಕ್ಷಿಯಾಗಿ
ಮಣ್ಣಲ್ಲಿ ಮಣ್ಣಾಗಿ ಹೋಗಿದ್ದ ಮಣ್ಣಿನ ಗೋಡೆಯಿತ್ತು.
ಅಳಿದುಳಿದ ಗೋಡೆಯ ಮೇಲೆ ಕೋವಿಯಿಂದ ಹೊರಟ ಗುಂಡು ಮಾಡಿದ
ನಾಲ್ಕಾರು ರಂಧ್ರಗಳಿದ್ದವು. ಕೊಂಚ ಕಿವಿಗೊಟ್ಟು
ಕೇಳಿದರೆ ಆ ರಂಧ್ರಗಳೇ ವಿಷಾದದ ಮೆಲುದನಿಯಲ್ಲಿ ಹೇಳುತ್ತಿದ್ದ,
ವರ್ಷವೊಂದರ ಹಿಂದೆ ನಡೆದ ದುರಂತ ಎಂತಹ ಕಲ್ಲುಮನಸ್ಸಿನವರ
ಎದೆಯನ್ನು ತಾಕುತ್ತಿತ್ತು.
ಅಂದು...
ಇಲ್ಲಿಯೇ, ಅಂದರೆ ನಕ್ಸಲರ
ಪ್ರಮುಖ ಅಡಗು ತಾಣ ಎಂದು ಗುರುತಿಸಲಾದ ಚಿಕ್ಕಮಗಳೂರು ಜಿಲ್ಲೆಯ
ಪಶ್ಚಿಮಘಟ್ಟದ ಪರ್ವತಗಳ ಕಣಿವೆಯಲ್ಲಿರುವ ಮೆಣಸಿನಹಾಡ್ಯ ಸಮೀಪದ ಅಮ್ಮಡ್ಲು
ಎಂಬ ಕಾಡಿನೂರಿನ ಪ್ರಶಾಂತತೆಯನ್ನು ಭೇದಿಸಿದ ಗುಂಡಿನ ಭೀಕರಸದ್ದುಗಳು,
ಆ ಸದ್ದುಗಳನ್ನು ಹಿಂಬಾಲಿಸಿ ನೋವಿನ ಚೀತ್ಕಾರಗಳು,
ಚೀತ್ಕಾರದ ಹಿಂದೆ ಹೃದಯ ನಡುಗಿಸುವ ಭೀಕರ ಮೌನ...
ಎಲ್ಲವೂ ಕೇಳಿಬಂದಿತ್ತು.
ನಕ್ಸಲರಿಗೆ ಆಶ್ರಯ ನೀಡಿದ್ದರೆಂದು ಆ ಗುಡಿಸಲು ವಾಸಿಗಳಾದ ರಾಮೇಗೌಡ್ಲು,
ಕಾವೇರಮ್ಮ ಮತ್ತು ಅವರ ಸಂಬಂಧಿ ಸುಂದರೇಶ್ ಹಾಗೂ
ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ ಒಕ್ಕೂಟದ ಕಾರ್ಯದರ್ಶಿ
ಪರಮೇಶ್‌ರನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದರು.
ಅವರು ಸರ್ಕಾರದ ಯಾವ ನೆರವನ್ನೂ ಅಪೇಕ್ಷಿಸದೆ
ನಿಸರ್ಗದೊಂದಿಗೆ ಬದುಕುವ ಆದಿವಾಸಿಗಳಾಗಿದ್ದರು.
ಪೊಲೀಸರು ಕೇವಲ ನಾಲ್ಕು ಜನರನ್ನು ಮಾತ್ರ ಕೊಲ್ಲಲಿಲ್ಲ.
ಅಂದು ಹತ್ಯೆಯಾದ ರಾಮೇಗೌಡ್ಲು ಮತ್ತು ಕಾವೇರಮ್ಮನ
ಚಿಕ್ಕಮಕ್ಕಳಾದ ಪ್ರಶಾಂತ ಮತ್ತು ಆದರ್ಶ ಈಗ ಬೀದಿಗೆ ಬಿದ್ದಿದ್ದಾರೆ.
ಪರಮೇಶ ಮತ್ತು ಸುಂದರೇಶ್‌ರವರ ವಯಸ್ಸಾದ ತಂದೆ-
ತಾಯಿಯವರ ಪರಿಸ್ಥಿತಿ ಇಂದು ಅತ್ಯಂತ ದಾರುಣವಾಗಿದೆ.
ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಾಗಿ ಕುದುರೆಮುಖ
ಅಭಯಾರಣ್ಯವನ್ನು ರಾಷ್ಟ್ರೀಯ ಉದ್ಯಾನವನ್ನಾಗಿ ಮಾಡಲು ಹೊರಟಿದೆ,
ಸುಮಾರು ಇಪ್ಪತ್ತು ಸಾವಿರದಷ್ಟು ಆದಿವಾಸಿಗಳು ಇದರಿಂದ
ಬದುಕು ಕಳೆದುಕೊಳ್ಳಲಿದ್ದಾರೆ, ಭೂಮಾಲೀಕರು
ಕೃಷಿ ಕೂಲಿ ಕಾರ್ಮಿಕರನ್ನು ಶೋಷಿಸುತ್ತಿದ್ದಾರೆ....
ಈ ದೌರ್ಜನ್ಯ ಶೋಷಣೆಗಳನ್ನೆಲ್ಲಾ ಮಟ್ಟಹಾಕಿ ಸಮಸಮಾಜ
ನಿರ್ಮಾಣ ನಮ್ಮ ಗುರಿ ಎಂದು ನಕ್ಸಲೀಯರು ಕಾರ್ಯಪ್ರವೃತ್ತರಾಗಿದ್ದಾರೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟ,
ಆದಿವಾಸಿ ಹಿತರಕ್ಷಣಾ ಸಮಿತಿಯ ನೇತೃತ್ವದಡಿ ಇಲ್ಲಿನ ಜನ
ಹತ್ತಾರು ವರ್ಷಗಳಿಂದ ಪ್ರಜಾತಾಂತ್ರಿಕವಾಗಿ ಹೋರಾಡುತ್ತಿದ್ದರೂ ಕಿವಿಗೊಡದ
ಸರ್ಕಾರ ನಕ್ಸಲೀಯರ ಗುಂಡು ಮೊಳಗಿದಾಕ್ಷಣ ಆದಿವಾಸಿಗಳಿಗೆ ಹಲವು ಕೋಟಿಗಳ
ಪ್ಯಾಕೇಜುಗಳನ್ನು ಘೋಷಿಸುತ್ತದೆ. ಈ
ಪ್ಯಾಕೇಜುಗಳು ಅನುಷ್ಠಾನಗೊಂಡ ಬಗ್ಗೆ ಯಾವುದೇ ಪುರಾವೆಗಳು ದೊರಕದಿದ್ದರೂ
ಸರ್ಕಾರ ಯಾವ ಬಗೆಯ ಹೋರಾಟಗಳಿಗೆ ಮಾನ್ಯತೆ ನೀಡುತ್ತದೆ ಎಂಬುದಂತೂ ಈ
ಪ್ಯಾಕೇಜ್ ಘೋಷಣೆಗಳ ಮೂಲಕ ತಿಳಿಯಬಹುದು.
ಕೇಂದ್ರ ಸರ್ಕಾರ ಇತ್ತೀಚೆಗೆ ಮಾರ್ಪಡಿಸಿದ ಅರಣ್ಯ ಕಾಯ್ದೆಯ ಪ್ರಕಾರ
ಆದಿವಾಸಿಗಳು, ಅರಣ್ಯವಾಸಿಗಳು ತಮ್ಮ
ಪ್ರದೇಶದಲ್ಲೇ ವಾಸಿಸುವ ಹಕ್ಕನ್ನು ಪಡೆದಿರುವುದು ಒಂದಿಷ್ಟು ಸಮಾಧಾನದ
ಸಂಗತಿ.
ಆದಿವಾಸಿಗಳು ನಕ್ಸಲೀಯರಿಗೆ ಆಶ್ರಯ ನೀಡುತ್ತಾರೆ,
ಪೊಲೀಸರ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ಸರ್ಕಾರ
ಆದಿವಾಸಿಗಳನ್ನು ಹತ್ಯೆ ಮಾಡುತ್ತದೆ. ಪೊಲೀಸ್
ಮಾಹಿತಿದಾರರೆಂಬ ಅನುಮಾನದಲ್ಲಿ ನಕ್ಸಲೀಯರು ಅನುಮಾನ ಬಂದ ಆದಿವಾಸಿಗಳನ್ನು
ಹತ್ಯೆ ಮಾಡುತ್ತಾರೆ. ಹಾಗಾಗಿ ಈಗ ಆದಿವಾಸಿಗಳು,
ಸರ್ಕಾರ ಹಾಗೂ ನಕ್ಸಲೀಯರ ಅನುಮಾನದ ಕಣ್ಣಿನಲ್ಲಿ
ನಿತ್ಯಜೀವನ ನಡೆಸುವುದು ದುಸ್ತರವಾಗಿದೆ. ಯಾವ
ಕ್ಷಣದಲ್ಲಿ ತಮ್ಮ ಜೀವ ಯಾರ ಕೈಯಲ್ಲಿ ಹೋಗುತ್ತದೆಯೋ ಎಂಬ ಭಯದಲ್ಲಿ
ಆದಿವಾಸಿಗಳು ಜೀವನ ಸಾಗಿಸಬೇಕಾಗಿದೆ.
ಪ್ರಾಣದ ಹಂಗು ತೊರೆದು ತಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ ಶೋಷಿತರ ಪರ
ಹೋರಾಟ ಮಾಡುತ್ತೇವೆನ್ನುವುದು ನಕ್ಸಲೀಯರ ಸಿದ್ಧಾಂತ ಬದ್ಧತೆಯ ಮಾತು.
ಪೊಲೀಸರಿಗೆ ನಕ್ಸಲೀಯರಂತೆ ಯಾವುದೇ ಸಿದ್ಧಾಂತದ ಹಂಗಿಲ್ಲ.
ಆದರೆ, ಪೊಲೀಸ್ ಕೆಲಸಕ್ಕೆ
ಬರುವುದೇ ಕಡುಬಡ ಕುಟುಂಬದವರು. ಅವರಿಗೆ ತಮ್ಮ
ಕುಟುಂಬದ ಬದುಕಿನ ಗಾಲಿಯನ್ನು ಸಾಗಿಸುವುದಷ್ಟೇ ಆದ್ಯತೆ.
ನಕ್ಸಲೀಯರು ಪೊಲೀಸರ ಮೂಲಕ ಸರ್ಕಾರವನ್ನು ಕಾಣುತ್ತಾರೆ.
ಹೊಟ್ಟೆಪಾಡಿಗೆ ಪೊಲೀಸ್ ಉದ್ಯೋಗಕ್ಕೆ ಸೇರಿದವರು ಮಹಾನ್
ಶತ್ರುಗಳಂತೆ ನಕ್ಸಲೀಯರಿಗೆ ಕಾಣುತ್ತಾರೆ.
ಹಾಗಾದರೆ, ತಪ್ಪು ಯಾರದು?
ನಕ್ಸಲೀಯರನ್ನು ಕೊಲ್ಲುವ ಪೊಲೀಸರದೋ?
ಪೊಲೀಸರನ್ನು ಕೊಲ್ಲುವ ನಕ್ಸಲೀಯರದೋ?
ನಕ್ಸಲೀಯರು ಆದಿವಾಸಿಗಳನ್ನಾಗಲೀ,
ಪೊಲೀಸರನ್ನಾಗಲೀ ಹತ್ಯೆ ಮಾಡಿದರೆ ಅದು ಖಂಡನೀಯ.
ಅವರ ಸಿದ್ಧಾಂತ,
ಉದ್ದೇಶಗಳೇನೇ ಇರಲಿ, ಅವರನ್ನು ಬಂಧಿಸಿ ಕಾನೂನು
ರೀತ್ಯಾ ಶಿಕ್ಷೆಗೊಳಪಡಿಸುವುದು ಅಗತ್ಯ.
ಅದರಲ್ಲಿ ಯಾವುದೇ ರಿಯಾಯಿತಿ ಅಗತ್ಯವಿಲ್ಲ.
ನಕ್ಸಲೀಯರು ಏನೇ ಮಾಡಲಿ ಅದಕ್ಕೆ ಕಾನೂನು ರೀತ್ಯಾ,
ಸಂವಿಧಾನದ ಅನುಸಾರ ನಾವು ಪ್ರತಿಕ್ರಿಯಿಸಬೇಕು.
ನಕ್ಸಲೀಯರು ನಮಗೆ ತಾರ್ಕಿಕವಾಗಿ ಉತ್ತರದಾಯಿಗಳಲ್ಲ.
ನಕ್ಸಲೀಯರ ಬಗ್ಗೆ ನಮ್ಮ ಟೀಕೆ-
ಟಿಪ್ಪಣಿಗಳು ಏನೇ ಇರಲಿ ಅವರೂ ಈ ದೇಶದ ನಮ್ಮಂತೆಯೇ
ಎಲ್ಲಾ ಹಕ್ಕುಗಳನ್ನುಳ್ಳ ಪ್ರಜೆಗಳು, ಅವರ
ದಾರಿಯನ್ನು ಒಪ್ಪಬೇಕಾಗಿಲ್ಲ. ಆದರೆ,
ಅವರ ಆಶಯಗಳನ್ನು ತಿರಸ್ಕರಿಸಲಾಗದು.
ಅವರಲ್ಲೂ ಬುದ್ಧಿಜೀವಿಗಳು,
ಉನ್ನತ ವಿದ್ಯಾಭ್ಯಾಸ ಮಾಡಿದವರು ಇದ್ದಾರೆಂದು ಸರ್ಕಾರವೇ ಹೇಳುತ್ತದೆ.
ಅವರನ್ನು ಏಕಾಏಕಿ ಏನ್‌ಕೌಂಟರ್‌ನಲ್ಲಿ ಸಾಯಿಸುವುದು ಯಾವ
ನ್ಯಾಯ? ಹೀಗೆ ಆದಿವಾಸಿಗಳನ್ನು,
ನಕ್ಸಲೀಯರನ್ನು ಎನ್‌ಕೌಂಟರ್‌ನಲ್ಲಿ ಸಾಯಿಸುವುದಾದರೆ
ನಮಗೆ ನ್ಯಾಯಾಲಯಗಳ ಅಗತ್ಯವಾದರೂ ಏನು?
ನಕ್ಸಲೀಯ ಸಮಸ್ಯೆ ಕಾನೂನು ಸಮಸ್ಯೆಯಲ್ಲ.
ಇದೊಂದು ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆ ಎಂದು ನೂರಾರು
ಚಿಂತಕರು ಪುನರುಚ್ಛರಿಸಿದ್ದಾರೆ. ಆದರೆ ಸರ್ಕಾರ
ಮಾತ್ರ ಬಂದೂಕಿನ ಮೂಲಕವೇ ಪರಿಹಾರಕ್ಕೆ ಹೊರಟಿದೆ.
ಜವಾಬ್ದಾರಿಯುತ ಸರ್ಕಾರ ಮಾತುಕತೆಯ ಮೂಲಕ ಸಮಸ್ಯೆಯ
ಪರಿಹಾರಕ್ಕೆ ಮುಂದಾಗುತ್ತದೆ. ಅಂತೆಯೇ
ನಕ್ಸಲೀಯರು ತಮ್ಮ ದಾರಿಯ ಬಗೆಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ.
ತಾವು ಯಾರ ಹಿತವನ್ನು ರಕ್ಷಿಸಲು ಬಂದಿದ್ದೇವೆಯೆಂದು
ಹೇಳುತ್ತಿದ್ದಾರೋ, ಆ ಆದಿವಾಸಿಗಳು ಅಪನಂಬಿಕೆಯ
ಅಡಕತ್ತರಿಯಲ್ಲಿ ಸಿಲುಕಿ ಪೊಲೀಸರಿಂದ ಹಾಗೂ ತಮ್ಮಿಂದ ಹತ್ಯೆಯಾಗುತ್ತಾ
ನಿರಂತರ ಭೀತಿಯಲ್ಲಿ ಬಾಳುವಂತಾದರೆ ತಮ್ಮ ಹೋರಾಟದ ಸಾರ್ಥಕತೆಯಾದರೂ ಏನೂ
ಎಂಬುದನ್ನು ನಕ್ಸಲೀಯರು ಪ್ರಶ್ನಿಸಿಕೊಳ್ಳಬೇಕಾಗಿದೆ.
****
ವರ್ಷದ ಹಿಂದೆ ಪೊಲೀಸರಿಂದ ಹತ್ಯೆಯಾದ ಆದಿವಾಸಿಗಳನ್ನು,
ಅವರನ್ನು ಮಣ್ಣು ಮಾಡಲಾದ ಸ್ಥಳದಲ್ಲಿ ನಿಂತು
ಇದನ್ನೆಲ್ಲಾ ನೆನಪಿಸಿಕೊಳ್ಳುತ್ತಿರುವಾಗ, ಒಂದು
ಪ್ರಶ್ನೆ ವಿಪರೀತ ಭಯ ಹುಟ್ಟಿಸಿತು... ಅಪ್ಪ
ಅಮ್ಮನನ್ನು ತನ್ನ ಕಣ್ಣೆದುರೇ ಪೊಲೀಸರು ಗುಂಡಿಟ್ಟು ಭೀಕರವಾಗಿ
ಕೊಂದಿದ್ದನ್ನು ಕಂಡಿರುವ ಪ್ರಶಾಂತ, ಈಗ
ಅನಾಥನಾಗಿದ್ದಾನೆ. ಆತನೇ ನಾಳೆ ನಕ್ಸಲೀಯನೋ,
ಉಗ್ರಗಾಮಿಯೋ ಆಗುವುದಿಲ್ಲವೆಂಬ ಗ್ಯಾರಂಟಿಯೇನಿದೆ?
ಹಾಗಾದಲ್ಲಿ ಅದಕ್ಕೆ ಯಾರು ಹೊಣೆ?
ಟಿಎಸ್‌ಐ
|