|
ಅದು ಬೆಂಗಳೂರಿನ ಹೊರವಲಯದ ಒಂದು ಬಯಲು;
ಅಥವಾ ಬೆಂಗಳೂರು ನಗರದ ಒಂದು ಖಾಸಗಿ ತಾಣ.
ರಾತ್ರಿ 10.30
ಕಳೆಯುತ್ತಿದ್ದಂತೆಯೇ ಬಣ್ಣ ಬಣ್ಣದ ನಾನಾ ಬಗೆಯ ಕಾರುಗಳು ಆ ತಾಣದತ್ತ
ತಿರುಗುತ್ತವೆ. ಆ ಕಾರ್‌ನಿಂದ ಇಳಿಯುವುದೂ
ಬಣ್ಣ ಬಣ್ಣದ ಮಂದಿಯೇ! ಆ ಗುಂಪಿನತ್ತ ಹೋದರೆ
ಸೆಂಟು ಪೂಸಿಕೊಂಡವರ ಯುವ ಪಡೆಯ ಸಂತೆಯೇ ನೆರೆದಿರುತ್ತದೆ;
ವೈನ್, ರಮ್‌ಗಳ ಘಾಟಿಗಿಂತ ಆ ಯುವ
ಪಡೆಯ ಸೆಂಟು ಕಡಿಮೆಯೇನೂ ಇರುವುದಿಲ್ಲ.
ಮೂಲೆಯಲ್ಲಿ ಗಿಟಾರ್ ಹಿಡಿದು ಡಿಜೆ
ತಾರಕ ಸ್ವರದಲ್ಲಿ ಹಾಡತೊಡಗಿದಂತೆ (ಅಥವಾ
ಕಿರುಚತೊಡಗಿದಂತೆ) ಯುವಪಡೆಯ ನೃತ್ಯವೂ
ತಾರಕದ ಹಾದಿ ಹಿಡಿಯುತ್ತದೆ; ಅತ್ತ ಬಾಟಲಿ,
ಗ್ಲಾಸುಗಳು ಖಾಲಿಯಾಗುತ್ತಿದ್ದಂತೆ ನೃತ್ಯ ಆವೇಗ
ಪಡೆದುಕೊಳ್ಳುತ್ತದೆ. ಅದಕ್ಕೆ ಸಮನಾಗಿ ಬಣ್ಣ
ಬಣ್ಣದ ಲೈಟ್‌ಗಳ ಕತ್ತಲೆ-ಬೆಳಕಿನ ಕಣ್ಣಾ-ಮುಚ್ಚಾಲೆಯೂ
ಸಾಗುತ್ತದೆ. ಆ ನೃತ್ಯದ ರಭಸ,
ಕಿವಿಗಡಚಿಕ್ಕುವ ರ್‍ಯಾಪ್ ಸಂಗೀತ,
ಬಾಟಲಿಯ ನಶೆಯ ಮಧ್ಯೆ ಯಾರು ಯಾರನ್ನು ಹಿಡಿದರೂ ಯಾರಿಗೂ ಎಚ್ಚರ ಇರುವುದಿಲ್ಲ...!
ಇದನ್ನೇ ನಾವು ಮೋಜು ಎಂದು ಕರೆಯುವುದಾದರೆ
ಅದು ಮೋಜಿನ ಒಂದು ಬಗೆ ಅಷ್ಟೇ. ನಗರದಲ್ಲಿ
ಹೆಚ್ಚುತ್ತಿರುವ ಫ್ಯಾಷನ್ ಶೋಗಳಲ್ಲಿ,
ಖಾಸಗಿ ಪಾರ್ಟಿಗಳಲ್ಲಿ, ರೇವ್
ಪಾರ್ಟಿಗಳಲ್ಲಿ ಇಂಥ ಮೋಜು ನಡೆಯುವುದು ತೀರಾ ಸಾಮಾನ್ಯವಾಗಿಬಿಟ್ಟಿದೆ.
ರೇವ್ ಪಾರ್ಟಿ ಎಂದರೆ ಇತ್ತೀಚೆಗೆ ಬೆಂಗಳೂರು ಹೊರವಲಯದ ಮಂಚನಬೆಲೆ
ಬಳಿ ನಡೆದ ಪಾರ್ಟಿ ನೆನಪಾಗಬಹುದು. ರಾತ್ರಿ
ಪೂರ ಸಾಗುವ ಈ ಪಾರ್ಟಿ, ಸಾಮಾನ್ಯವಾಗಿ ಬಯಲು
ಪ್ರದೇಶದಲ್ಲಿ ನಡೆಯುವಂಥದು. ಎನರ್ಜಿ
ಹೆಚ್ಚಿಸಲು ಲೇಸರ್ ಲೈಟ್‌ಗಳ ಥಳಕು-ಬಳಕಿನ
ಮೇಲಾಟವೇ ಇದರ ಜೀವಾಳ. ಇಂಥ ಪಾರ್ಟಿಗಳಲ್ಲಿ
ಮಾದಕ ದ್ರವ್ಯಗಳ ಸೇವನೆಗೆ ಕಡಿವಾಣ ಹಾಕಲಾಗದು.
"ಕ್ಲಬ್
ಡ್ರಗ್", ಕೊಕೈನ್‌ನಂತಹ
ಉದ್ರೇಕಕಾರಿ ಮದ್ದು
ತೆಗೆದುಕೊಳ್ಳುವುದು ವಿಶೇಷವೇನಲ್ಲ. 80ರ
ದಶಕದಲ್ಲಿ ಸ್ವೇಚ್ಛೆಯಾಗಿ
ಕುಣಿಯುತ್ತಿದ್ದ ಒಂದು ಮಾದರಿ ಹಿಪ್ಪಿಗಳ ಪಾರ್ಟಿಯಂಥದು ಇದು.
ಇಂಗ್ಲೆಂಡ್, ಅಮೆರಿಕಗಳಲ್ಲಿ ತೀರಾ
ಸಾಮಾನ್ಯವಾದ ಈ ರೇವ್ ಪಾರ್ಟಿ ಸಂಸ್ಕೃತಿ ಬೆಂಗಳೂರಿಗೆ ಬಂದು ಬಹುಕಾಲವಾಯಿತು.
ಇನ್ನು ಈ ಮುನ್ನ ಬೆಂಗಳೂರಿನಲ್ಲಿ
ನಾಯಿಕೊಡೆಗಳ ಮಾದರಿಯಲ್ಲಿ ಎಲ್ಲೆಂದರಲ್ಲಿ ಎದ್ದಿರುವ ಡಿಸ್ಕೋಥೆಕ್,
ಡ್ಯಾನ್ಸ್‌ಬಾರ್‌ಗಳಲ್ಲೂ ಮೇಲೆ ಹೇಳಿದಕ್ಕಿಂತಲೂ ವಿಪರೀತವಾದ
ಮೋಜಿನಾಟ ನಡೆಯುತ್ತಿತ್ತು. ಲೈವ್‌ಬ್ಯಾಂಡ್
ಮಾಲೀಕರಿಗಷ್ಟೇ ಅಲ್ಲ, ನರ್ತಕಿಯರಿಗೂ
ನೋಟುಗಳ ಮಳೆಯೇ ಸುರಿಯುತ್ತಿತ್ತು.
ಪೊಲೀಸರೊಂದಿಗೆ ಒಳ ಒಪ್ಪಂದ
ಮಾಡಿಕೊಂಡಿದ್ದರಿಂದಾಗಿ ಲೈವ್‌ಬ್ಯಾಂಡ್ ವ್ಯವಹಾರ ಅಬಾಧಿತವಾಗಿ
ಸಾಗಿತ್ತು. ಆದರೆ
2005ರಲ್ಲಿ ಅಂದಿನ ಪೊಲೀಸ್ ಕಮಿಷನರ್ ಅಜಯ್‌ಕುಮಾರ್ ಸಿಂಗ್ ಅವರ
ಕಠಿಣ ಕ್ರಮದಿಂದಾಗಿ ಇಂಥದಕ್ಕೆಲ್ಲಾ ಕಡಿವಾಣ ಬಿತ್ತು.
ಮದ್ಯ ಮಾರುವ ಸ್ಥಳದಲ್ಲಿ ಮಹಿಳೆಯರು ಕೆಲಸ ಮಾಡುವಂತಿಲ್ಲ;
ನೃತ್ಯ ಮಾಡುವ ಸ್ಥಳದಲ್ಲಿ ಮದ್ಯ ಸರಬರಾಜು ಮಾಡುವಂತಿಲ್ಲ;
ರಾತ್ರಿ 11.30ಕ್ಕೆ ಎಲ್ಲಾ ಬಗೆಯ
ಡ್ಯಾನ್ಸ್‌ಬಾರ್, ಮೋಜಿನಾಟವೂ
ಮುಕ್ತಾಯಗೊಳ್ಳಬೇಕು ಎಂಬ ನಿಯಮಗಳನ್ನು ಯಾವಾಗ ನಗರ ಪೊಲೀಸರು
ಕಟ್ಟುನಿಟ್ಟಾಗಿ ಜಾರಿಗೊಳಿಸಿದರೋ ಲೈವ್‌ಬ್ಯಾಂಡ್ ವಹಿವಾಟಿಗೆ ಪೆಟ್ಟು
ಬಿತ್ತು. ನಿಯಮ ಅನುಸರಿಸದ ಡಿಸ್ಕೋಥೆಕ್‌ಗಳ
ಮೇಲೆ ದಾಳಿ ನಡೆದವು. ಇಂಥವರಿಗೆ ನೆರವು
ನೀಡಿದ್ದ ಪೊಲೀಸರು ಅಮಾನತಿಗೊಳಗಾದರು.
ಲೈವ್‌ಬ್ಯಾಂಡ್‌ಗಳೆಲ್ಲಾ ಹೊಸದಾಗಿ ಪರವಾನಗಿ ಪಡೆಯುವಂತೆ ಆದೇಶಿಸಲಾಯಿತು.
ಮನೋರಂಜನಾ ತಾಣವನ್ನು ನಿಯಂತ್ರಿಸುವ ಅಧಿಕಾರ ಪೊಲೀಸರಿಗಿಲ್ಲ ಎಂದು
ಲೈವ್‌ಬ್ಯಾಂಡ್ ಮಾಲೀಕರೆಲ್ಲಾ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗೆ
ತೆರಳಿದರೂ ಕೇಸು ಅವರ ಪರ ಆಗಲಿಲ್ಲ. ಹೀಗಾಗಿ
ಅವರೆಲ್ಲಾ ಕಾನೂನಿಗೆ ತಲೆಬಾಗಲೇಬೇಕಾಯಿತು.
"ಈಗಲೂ ಕೂಡಾ ನಾವು
ಡ್ಯಾನ್ಸ್‌ಬಾರ್‌ಗಳಿಗೆ ಕಾನೂನು ಅನುಸಾರ ಪರವಾನಗಿ ನೀಡುತ್ತೇವೆ.
ಆದರೆ ಅಲ್ಲಿ ಮದ್ಯ ಸರಬರಾಜು ಮಾಡುವಂತಿಲ್ಲ.
ರಾತ್ರಿ 11.30ಕ್ಕೆ ಬಾಗಿಲು
ಮುಚ್ಚಬೇಕು" ಎನ್ನುತ್ತಾರೆ ನಗರ ಪೊಲೀಸ್
ಕಮಿಷನರ್ ಶಂಕರ ಬಿದರಿ. ಈ ನಿಯಮಗಳನ್ನು
ಪಾಲಿಸಬೇಕೆಂದರೆ ಬಾಗಿಲು ಮುಚ್ಚಬೇಕೆಂದೇ ಡಿಸ್ಕೋಥೆಕ್‌ಗಳು ಅರ್ಥ
ಮಾಡಿಕೊಂಡವು.
ಹೀಗೆ ಮದ್ಯ ನಿಷೇಧವಾಗಿ,
ಡ್ಯಾನ್ಸ್‌ಬಾರ್‌ಗಳ ರಾತ್ರಿಪಾಳಿ ಕಿರಿದಾಗಬೇಕಾದ ಬಿಗಿ ಕಾನೂನು
ಜಾರಿಯಾಗುತ್ತಿದ್ದಂತೆಯೇ ಖಾಸಗಿ ಪಾರ್ಟಿಗಳು ಚಿಗಿತುಕೊಳ್ಳತೊಡಗಿದವು.
ಅನಧಿಕೃತವಾಗಿ ಸಾಗುವ ಈ ಪಾರ್ಟಿಗಳು ಪೊಲೀಸರ ಕಣ್ಣಿಗೆ
ಬೀಳುವುದಿಲ್ಲ. ಹೆಸರಾಂತ ಡಿಜೆಗಳನ್ನು ಬುಕ್
ಮಾಡಿಕೊಳ್ಳುವ ಆಯೋಜಕರು, ಪಬ್,
ಡಿಸ್ಕೋಥೆಕ್‌ಗಳನ್ನು ಮೀರಿಸುವಂಥ ಖಾಸಗಿ ಪಾರ್ಟಿಗಳನ್ನು
ಆಯೋಜಿಸುತ್ತಾರೆ.
ಡಿಜೆ ಅರ್ಥಾತ್ ಡಿಸ್ಕ್
ಜಾಕಿ ಎಂದರೆ ರೆಕಾರ್ಡೆಡ್ ಮ್ಯೂಸಿಕ್
ಟ್ರಾಕ್ ಆಯ್ಕೆ ಮಾಡಿ ಹಾಡುವವ; ಪಾರ್ಟಿ
ನಡೆಸಿಕೊಡುವವ; ಡಿಸ್ಕೋ,
ರೇವ್ ಪಾರ್ಟಿಗಳಲ್ಲಿ ರಿಮಿಕ್ಸ್ ಟ್ರಾಕ್ಸ್ ಜೊತೆಗೆ ಹಾಡಿ,
ಮೋಜಿಗೆ ಎನರ್ಜಿ
ತುಂಬುವವರು ಇದೇ ಡಿಜೆಗಳು. ಪಕ್ಕಾ
ಹೈಟೆಕ್‌ಗಳಾದ ಒಂದು ಡಜನ್‌ಗಿಂತಲೂ ಹೆಚ್ಚು ಬೆಂಗಳೂರು ಡಿಜೆಗಳ ಚಿತ್ರ ಸಹಿತ
ವಿವರ, ಇಮೇಲ್ ವಿಳಾಸಗಳೆಲ್ಲಾ
ವೆಬ್‌ಸೈಟ್‌ನಲ್ಲಿ ಲಭ್ಯ.
"ಸ್ಥಳೀಯ ಡಿಜೆಗಳಲ್ಲದೆ ಬಾಲಿವುಡ್
ಮತ್ತು ವಿದೇಶಿ ಡಿಜೆಗಳೂ ಕೂಡಾ ಈ ಮುನ್ನ ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಟಿ
ನಡೆಸಿಕೊಡಲು ಬೆಂಗಳೂರಿಗೆ ಬರುತ್ತಿದ್ದರು.
ಹೆಚ್ಚಿನ ಮೊತ್ತ ನೀಡಿ ಕರೆಸುವ ಅಂಥ ಡಿಜೆಗಳಿಗೆ ರಾತ್ರಿ
11.30ಕ್ಕೆ ಕಾರ್ಯಕ್ರಮ ನಿಲ್ಲಿಸಿ ಎಂದು
ಹೇಳಲು ಹೇಗೆ ಸಾಧ್ಯ? ಹೀಗಾಗಿ ಖಾಸಗಿ
ಪಾರ್ಟಿ ಆಯೋಜಕರು ರಹಸ್ಯವಾಗಿ ಅಂಥ ಡಿಜೆಗಳನ್ನು ಕರೆಸಬೇಕಾಗಿದೆ"
ಎನ್ನುತ್ತಾರೆ ಫ್ಯಾಷನ್ ಛಾಯಾಗ್ರಾಹಕ ಹರೀಶ್
(ಹೆಸರು ಬದಲಿಸಿದೆ).
"ಇದು ಕೇವಲ ನನ್ನ ಹವ್ಯಾಸ ಅಥವಾ
ವೃತ್ತಿ ಅಲ್ಲ. ನನ್ನ ಜೀವನ ಶೈಲಿ.
ಮೋಜು ಬಯಸುವ ಜನರಿಗೆ ಅದನ್ನು ಒದಗಿಸುವ ನಾನೂ ಒಬ್ಬ ಕಲಾವಿದ.
ರಾತ್ರಿಪೂರಾ ಕಾರ್ಯ ನಿರ್ವಹಿಸಲು ಬಿಪಿಒ ಕಚೇರಿಗಳಿಗೆ ಅನುಮತಿ
ನೀಡುವಾಗ ರಾತ್ರಿ ಪಾರ್ಟಿಗಳಿಗೆ ಏಕೆ ಅವಕಾಶ ನೀಡಬಾರದು?"
ಎಂಬುದು ಡಿಜೆ ಜಾಕ್ ಸುಲ್ತಾನಿ (ಹೆಸರು
ಬದಲಿಸಿದೆ) ಪ್ರಶ್ನೆ.
ಕಟ್ಟುನಿಟ್ಟಿನ ಕಾನೂನು ಕ್ರಮಗಳಿಂದಾಗಿ
ಡಿಜೆಗಳು ಕೂಡಾ ವಲಸೆ ಹೋಗತೊಡಗಿದ್ದಾರೆ. "ಬೆಂಗಳೂರಿನ
ಪಬ್‌ಗಳಲ್ಲಿ ಪಾರ್ಟಿಗಳು ನಡೆಯುತ್ತಿದ್ದರೂ ನೃತ್ಯ ಮತ್ತು ಡಿಜೆ ಪ್ಲೇ,
ಲೌಡ್‌ಸಾಂಗ್‌ಗಳನ್ನೆಲ್ಲ ನಿಷೇಧಿಸಲಾಗಿದೆ.
ಜನ ಸುಮ್ಮನೆ ಕುಳಿತು ಡ್ರಿಂಕ್ಸ್ ಮಾಡಿ ಹೋಗಬೇಕು.
ಅದಕ್ಕೂ ಕಾಲಮಿತಿ ಹಾಕಲಾಗಿದೆ.
ಹೀಗಾಗಿ ನಮಗೆ ಕೆಲಸವಿಲ್ಲವಾಗಿದೆ. ಗೋವಾ,
ಮುಂಬೈಗಳಿಗೆ ತೆರಳಲು ಚಿಂತಿಸುತ್ತಿದ್ದೇನೆ"
ಎನ್ನುತ್ತಾರೆ ಖಾಸಗಿ ಮನೆಯೊಂದರ ಪಾರ್ಟಿಯಲ್ಲಿ ಭಾಗವಹಿಸಿದ್ದ ಡಿಜೆ
ಅರುಣ್ (ಹೆಸರು ಬದಲಿಸಿದೆ).
ಖಾಸಗಿ ಪಾರ್ಟಿಗಳನ್ನು ಅತ್ಯಂತ ರಹಸ್ಯವಾಗಿಯೇ
ಆಯೋಜಿಸಲಾಗುತ್ತದೆ. ಡಿಜೆಗಳು ಆಯ್ದ
ತಾಣದಲ್ಲಿ ಮೇಲ್ವರ್ಗದ ತಮ್ಮ ರೆಗ್ಯುಲರ್
ಕಸ್ಟಮರ್ಗಳಿಗಾಗಷ್ಟೇ ಪಾರ್ಟಿ
ನಡೆಸಿಕೊಡುತ್ತಾರೆ. ಅದರ ಪ್ರವೇಶ ಶುಲ್ಕವೇ
500ರಿಂದ 1500
ರೂ.ಗಳ ವರೆಗೂ ಇರುತ್ತದೆ.
ಅಲ್ಲಿ ಎಲ್ಲಾ ಬಗೆಯ ಮದ್ಯದ ಜೊತೆಗೆ ಮಾದಕ ದ್ರವ್ಯಗಳ ಸರಬರಾಜು
ಕೂಡಾ ಇರುತ್ತದೆ. ಕೆಲವು ಪಾರ್ಟಿಗಳಲ್ಲಿ
ಕಾಂಡೊಮ್ ಸರಬರಾಜು ಕೂಡಾ ಇರುತ್ತದೆ ಎಂದರೆ ಪಾರ್ಟಿಯ ಸ್ವರೂಪ
ಎಂಥದ್ದಿರುತ್ತದೆ ನೀವೇ ಊಹಿಸಿ. ಪಾರ್ಟಿ
ತಾಣ ಎಷ್ಟು ರಹಸ್ಯವಾಗಿರುತ್ತದೆ ಎಂದರೆ ಆಹ್ವಾನಿತರಿಗೂ ಕೂಡಾ ಅಲ್ಲಿಗೆ
ತೆರಳುವವರೆಗೆ ಅದರ ಸುಳಿವು ಇರುವುದಿಲ್ಲ.
ಆಹ್ವಾನಿತರಿಗೆ ಇ-ಮೇಲ್ ಅಥವಾ ಎಸ್‌ಎಂಎಸ್
ಮೂಲಕ ಪಿಕ್‌ಅಪ್ ಪಾಯಿಂಟ್‌ಗೆ ಬರಬೇಕಾದ ಸಮಯವನ್ನಷ್ಟೇ ಸೂಚಿಸಲಾಗಿರುತ್ತದೆ.
ಕೆಲವು ಖಾಸಗಿ ಪಾರ್ಟಿಗಳಲ್ಲಿ
ಜೋಡಿಗಳಿಗಷ್ಟೇ
ಪ್ರವೇಶ. ಪುಂಡರ ಗುಂಪು ಪ್ರವೇಶಿಸಿ ದಾಂಧಲೆ
ಎಬ್ಬಿಸುವುದನ್ನು ತಡೆಯಲು ಈ ಕ್ರಮ. ಯಾವುದೇ
ಜೋಡಿ ಒಮ್ಮೆ ಒಳಗೆ ಪ್ರವೇಶಿಸಿದ ಮೇಲೆ ತಮ್ಮ-
ತಮ್ಮ ಸಂಗಾತಿಗಳನ್ನು ಸ್ವೇಚ್ಛೆಯಿಂದ
ಬದಲಾಯಿಸಿಕೊಳ್ಳಲು ಯಾರದೇ ಅಡ್ಡಿ ಇಲ್ಲ.
ಡಿಜೆಗಳ ಸ್ವರೂಪದಲ್ಲೂ ಇತ್ತೀಚೆಗೆ ಬದಲಾವಣೆ
ಕಂಡು ಬಂದಿದೆ. ಬರೀ ಪುರುಷ ಡಿಜೆಗಳಿಂದಲೇ
ತುಂಬಿಹೋಗಿದ್ದ ರಾತ್ರಿ ಬದುಕಿನಲ್ಲಿ
ಮಹಿಳಾ ಡಿಜೆಗಳೂ ಪ್ರವೇಶಿಸಿರುವುದು ಇತ್ತೀಚಿನ ಟ್ರೆಂಡ್.
ಅರ್ಲೀನ್ ಮೇರಿಯಾ ಎಂಬ 24ರ ಹರೆಯದ
ಯುವತಿ ತಾನು ಬೆಂಗಳೂರಿನ ಪ್ರಪ್ರಥಮ ಮಹಿಳಾ ಡಿಜೆ ಎಂದು ಹೆಮ್ಮೆಯಿಂದ
ಹೇಳಿಕೊಳ್ಳುತ್ತಾಳೆ. 18ರ ಹರೆಯದಿಂದಲೇ
ವಿಖ್ಯಾತ ಡಿಜೆಗಳಿಗೆ ಸಾಥ್ ನೀಡಿದ ಅನುಭವ ಆಕೆಗಿದೆಯಂತೆ.
ಪಾರ್ಟಿಗಳಲ್ಲಿ ಡಿಜೆಗಳಷ್ಟೇ ಬೌನ್ಸರ್‌ಗಳದ್ದೂ ಮಹತ್ವದ ಪಾತ್ರ.
ಹುಚ್ಚಾಟ ಎಲ್ಲೆ ಮೀರಿದಾಗ ದಾಂಧಲೆ ನಡೆಸುವವರನ್ನು ಎಳೆದೊಯ್ದು
ಹೊರಗೆ ಹಾಕಲು ಮತ್ತು ಆಪತ್ಕಾಲದಲ್ಲಿ ರಕ್ಷಣೆ ಪಡೆಯಲು
ಬೌನ್ಸರ್‌ಗಳನ್ನು
ನೇಮಿಸಿಕೊಳ್ಳಲಾಗಿರುತ್ತದೆ. ಆದರೆ
ಪಾರ್ಟಿಯಲ್ಲಿ ಆಗಮಿಸಿದ ಯುವತಿಯರ ಪಾಲಿಗೆ ಈ ಬೌನ್ಸರ್‌ಗಳೇ
ವಿಲನ್ಗಳಾದ
ಪ್ರಕರಣಗಳು ಅದೆಷ್ಟೋ. ಹೀಗಾಗಿಯೇ
ಇತ್ತೀಚೆಗೆ ಚಂಡೀಗಢದಲ್ಲಿ ಕಟ್ಟುಮಸ್ತಾದ ಮಹಿಳೆಯರೂ ಬೌನ್ಸರ್‌ಗಳಾಗಲು
ಮುಂದೆ ಬರುತ್ತಿದ್ದಾರೆ. ಬೆಂಗಳೂರಿನ
ಪಾರ್ಟಿಗಳಲ್ಲೂ ಇಂಥ ಬೌನ್ಸರ್‌ಗಳನ್ನು ಕಾಣಬಹುದಾದ ದಿನ ದೂರವಿಲ್ಲ.
ಈ ನಿಟ್ಟಿನಲ್ಲಿ ಮಹಿಳೆಯರು ಅಕ್ಷರಶಃ ಸಮಾನತೆ
ಸಾಧಿಸಲು ಹೊರಟಿದ್ದಾರೆ ಎನ್ನಬಹುದು.
ಒಂದು ಕಡೆ ಪೊಲೀಸ್ ಪಡೆ ಬಿಗಿ ಕಾನೂನು
ರೂಪಿಸಿ ರಾತ್ರಿ ಮೋಜಿಗೆ ನಿಯಂತ್ರಣ ಹೇರಿದಷ್ಟೂ ಹೇಗಾದರೂ ಸರಿ,
ಎಲ್ಲಾದರೂ ಸರಿ ಮೋಜಿನ ದಾರಿ ಹುಡುಕಿಕೊಳ್ಳುವ ಯುವಜನರ ತುಮುಲವೂ
ಹೆಚ್ಚಾಗುತ್ತಿದೆ. ಐಟಿ-ಬಿಪಿಒ
ಯುಗದ ಹೊಸ ಸಂಸ್ಕೃತಿಯ, ಹೊಸ ತಲೆಮಾರಿನ
ಜನರಿಗೆ ಹಳೆ ಕಾಲದ ಕಾನೂನುಗಳಿಂದ ಕಟ್ಟಿಹಾಕಲು ಹೊರಟಾಗ ಸಂಘರ್ಷವಾಗುವುದು
ಸಹಜವೇ. ಇಂದು ಬೆಂಗಳೂರು ರಾತ್ರಿ
10.30ಕ್ಕೆ ನಿದ್ರೆಯ ಮಂಪರಿಗೆ ಜಾರುವ ಹಳೆಯ
ಊರಾಗಿಲ್ಲ. ರಾತ್ರಿ ಪೂರಾ ಈ ನಗರಿಯ ಕಿರು
ರಸ್ತೆಗಳಲ್ಲಿ ಬಿಪಿಒ ಸಂಸ್ಥೆಗಳ ವಾಹನಗಳು ಯಮವೇಗದಲ್ಲಿ ಸದ್ದು ಮಾಡುತ್ತಾ
ಸಾಗುತ್ತಿರುತ್ತವೆ; ರಾತ್ರಿ
11.30ರವರೆಗೆ ಪಬ್,
ಬಾರ್‌ಗಳ ಖುಲ್ಲಂಖುಲ್ಲಾ ನಡೆದರೆ 11.30ರ
ನಂತರವೂ ಕದ್ದು- ಮುಚ್ಚಿ ಮೋಜು ಮಸ್ತಿ
ಸಾಗುತ್ತಲೇ ಇರುತ್ತದೆ. ಬೆಂಗಳೂರಿನ
ಜನಸಂಖ್ಯೆ ಏರುತ್ತಲೇ ಇದೆ. 2001ರ
ಸಮೀಕ್ಷೆಯ ಪ್ರಕಾರ ಬೆಂಗಳೂರಿನಲ್ಲಿ 65
ಲಕ್ಷದಷ್ಟಿದ್ದ ಜನಸಂಖ್ಯೆ 2005ರಲ್ಲಿ
ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ)
ಸಮೀಕ್ಷೆಯಂತೆ ೭0 ಲಕ್ಷಕ್ಕೇರಿದೆ.
ಅದಲ್ಲದೆ ದಿನಕ್ಕೆ 1ರಿಂದ
1.5 ಲಕ್ಷ ಜನ ಬೆಂಗಳೂರಿಗೆ ಭೇಟಿ
ನೀಡುತ್ತಾರೆ. ಹೀಗೆ ಮಿತಿಮೀರಿ
ಹೊರ ಜನರನ್ನು
ತುಂಬಿಕೊಳ್ಳುತ್ತಿರುವ ಬೆಂಗಳೂರು ರಾತ್ರಿಗಳು ಭೀಕರವಾಗುತ್ತಲೇ ಇವೆ.
ಅದಿರಲಿ, ದೇಶ
ಸುತ್ತಿ ಬಂದ, ಸುಶಿಕ್ಷಿತ ಯುವಜನತೆ
ನೈಟ್‌ಪಾರ್ಟಿಗಳ ಕುರಿತು ಏನು ಹೇಳುತ್ತಾರೆ? "ನಾನು
ನ್ಯೂಯಾರ್ಕ್, ಮಾಂಟ್ರಿಯಲ್,
ಒಟ್ಟಾವ, ಸೈಪ್ರಸ್ ಇತ್ಯಾದಿ
ನಗರಗಳಲ್ಲೆಲ್ಲಾ ಹೋಗಿ ಬಂದಿದ್ದೇನೆ.
ಅಲ್ಲೆಲ್ಲಾ ವೀಕೆಂಡ್ ಪಾರ್ಟಿಗಳಿಗೆ ಇಷ್ಟೆಲ್ಲಾ ಕಡಿವಾಣ ಇಲ್ಲ.
ಅಮೆರಿಕದಲ್ಲಂತೂ ಕಂಪ್ಲೀಟ್
ನ್ಯೂಡ್ ಡಾನ್ಸ್ಗೇ ಪರವಾನಗಿ ಇದೆ.
ವಾರದಲ್ಲಿ ಐದು ದಿನಗಳ ಕಾಲ ಸಮಯದ ಪರಿವೆ ಇಲ್ಲದೆ ದುಡಿಯುವ ನಮಗೆ
ವೀಕ್‌ಎಂಡ್‌ಗಳಲ್ಲಾದರೂ ಸ್ವಲ್ಪ ರಿಲಾಕ್ಸ್ ಆಗಿರಲು ಅವಕಾಶ ಕೊಡದಿದ್ದರೆ
ಹೇಗೆ?" ಎನ್ನುತ್ತಾರೆ ಸಾಫ್ಟ್‌ವೇರ್
ಕಂಪನಿಯೊಂದರ ಟೀಮ್ ಲೀಡರ್ ಆಗಿರುವ ಶಂಕರ್.
ಬರೀ ಮೋಜು ಮಾಡಿಕೊಂಡು ಎದ್ದು
ಹೋಗುತ್ತಿದ್ದರೆ ರಾತ್ರಿ ಪಾರ್ಟಿಗಳನ್ನು ಯಾರೂ ಅಷ್ಟು ಗಂಭೀರವಾಗಿ
ಪರಿಗಣಿಸುತ್ತಿರಲಿಲ್ಲವೇನೋ; ಸ್ವಾತಂತ್ರ್ಯಕ್ಕೆ
ಧಕ್ಕೆಯಾಗುತ್ತಿದೆ ಎಂದು ಪ್ರತಿಭಟನೆಗಿಳಿದ ಬಿದ್ದಪ್ಪ,
ಕಾರ್ನಾಡ್‌ರಂತಹ ಸೆಲೆಬ್ರಿಟಿಗಳನ್ನು ಬೆಂಬಲಿಸುತ್ತಿದ್ದರೇನೋ.
ಆದರೆ ರಾತ್ರಿಪಾರ್ಟಿಗಳು ನಗರದ ಅಪರಾಧ ಸೂಚಿಯ ಜೊತೆಗೆ ತಳುಕು
ಹಾಕಿಕೊಂಡಿವೆಯಲ್ಲಾ ಅದಕ್ಕೇನು ಮಾಡುವುದು?
ರಾತ್ರಿ ಪಾರ್ಟಿ ಮುಗಿಸಿ ಮದ್ಯದ ನಶೆಯಲ್ಲಿರುವವರು ಎರ್ರಾಬಿರ್ರಿ ವಾಹನ
ಚಾಲನೆ ಮಾಡಿ ಅನಾಹುತಕ್ಕೆ ಕಾರಣರಾಗುವ ಪ್ರಮಾಣ ಹೆಚ್ಚುತ್ತಲೇ ಇದೆ;
ಪಾರ್ಟಿಗಳಿಗೆ ಸರಬರಾಜಾಗುವ ಮಾದಕ ದ್ರವ್ಯಗಳ ದಂಧೆಯದೇ ಮತ್ತೊಂದು
ಕರಾಳ ಲೋಕ; ಇನ್ನು ಪಾರ್ಟಿ ಮೋಜಿನ
ಸೆಳೆತಕ್ಕೆ ಒಳಗಾಗುವ ಯುವತಿಯರು ಅತ್ಯಾಚಾರ,
ದೌರ್ಜನ್ಯಕ್ಕೆ ಒಳಗಾಗುವುದು ಕೂಡಾ ಮಾಮೂಲು.
ಅವರೇ ಬಯಸಿ ಪಾರ್ಟಿಗೆ ಹೋಗಿರುವುದರಿಂದ ದೌರ್ಜನ್ಯದ ಬಹಳಷ್ಟು ದೂರುಗಳು
ದಾಖಲಾಗುವುದೇ ಇಲ್ಲ.
ಬದಲಾಗುತ್ತಿರುವ ಸಂಸ್ಕೃತಿಗೆ ಸಾಫ್ಟ್‌ವೇರ್,
ಫ್ಯಾಷನ್ ಲೋಕ, ಬಿಪಿಒ ಕಂಪನಿಗಳೇ
ಸಂಪೂರ್ಣ ಕಾರಣ ಎನ್ನಲಾಗದಿದ್ದರೂ ಅವುಗಳ ಕೊಡುಗೆಯನ್ನು
ನಿರ್ಲಕ್ಷಿಸುವಂತಿಲ್ಲ. ಭೂಮಿಯ ಇನ್ನೊಂದು
ಬದಿಯ ರಾಷ್ಟ್ರವೊಂದರ ಹಗಲಿನ ವೇಳೆಯ ವ್ಯವಹಾರ ನಡೆಸಿಕೊಡಲು ಇಲ್ಲಿ ರಾತ್ರಿ
ಪೂರಾ ನಿದ್ದೆಗೆಡುವ
"ಹೊರಗುತ್ತಿಗೆ"ಯ
ಬದುಕು ಹೆಚ್ಚುತ್ತಲೇ ಇದೆ; ಅಲ್ಲಿಯ ಭಾಷಾ
ಶೈಲಿ, ಧ್ವನಿಯಷ್ಟೇ ಅಲ್ಲ;
ಅಲ್ಲಿಯ ಸಂಸ್ಕೃತಿ ಕೂಡಾ ಇಲ್ಲಿ ಪ್ರಚಲಿತವಾಗುತ್ತಿದೆ.
ಹೊರಗಿನವರಿಂದಲೇ ತುಂಬಿರುವ ಬೆಂಗಳೂರು
ಹೊರಸಂಸ್ಕೃತಿಯಿಂದ ಬಚಾವಾಗಿ ಬದುಕಲು ಯೋಗ್ಯವಾಗುತ್ತದೆಯೇ?
ಹಾಗೆ ಯೋಗ್ಯವಾಗಿಸಬೇಕಾದರೆ ಹೊಸ ತಲೆಮಾರು,
ಹೊಸ ಸಂಸ್ಕೃತಿಗೆ ತಕ್ಕಂತೆ ಹೊಸ ಕಾನೂನುಗಳು ಮತ್ತು ಹೊಸ
ಕಟ್ಟುನಿಟ್ಟು ಕ್ರಮಗಳನ್ನೂ ರೂಪಿಸಬೇಕಿದೆಯಲ್ಲವೇ;
ಖಾಸಗಿ ಪಾರ್ಟಿಗಳ ಹೆಸರಿನಲ್ಲಿ
"ರಂಗೋಲ"ಯಡಿ
ತೂರುವವರನ್ನೂ ನಿಯಂತ್ರಿಸಬೇಕಲ್ಲವೇ? ಅಕ್ಕ
ಸಮ್ಮೇಳನದಲ್ಲಿ ಅಮೆರಿಕದ ಅನುಭವ ಪಡೆದು ಬಂದ ನಮ್ಮ
ಮುಖ್ಯಮಂತ್ರಿಗಳಿಂದ ಈ ನಿಯಂತ್ರಣ ಕ್ರಮವನ್ನು ನಿರೀಕ್ಷಿಸಬಹುದೇ?
ಟಿಎಸ್‌ಐ
ಇತರ ನಗರಗಳಲ್ಲಿ
ಮುಂಬೈ
ಬಾಲಿವುಡ್ ರಾಜಧಾನಿಯಾದ್ದರಿಂದ
ಇಲ್ಲಿ ವೀಕ್‌ಎಂಡ್ ರಾತ್ರಿಗಳು ಮಾತ್ರವಲ್ಲ,
ಉಳಿದ ರಾತ್ರಿಗಳಲ್ಲೂ ಕೂಡಾ ಪಾರ್ಟಿಗಳದ್ದೇ ಕಾರುಬಾರು.
ಮಧ್ಯರಾತ್ರಿ 1 ಗಂಟೆಯವರೆಗಷ್ಟೇ
ನೈಟ್‌ಕ್ಲಬ್‌ಗಳಿಗೆ ಅನುಮತಿ ಇದೆ. ಆದರೆ ಈ
ನಿಯಮ ಪಾಲಿಸುವ ಬಾರ್‌ಗಳು ತೀರಾ ವಿರಳ.
ಬೆಳಗಿನ ಜಾವದವರೆಗೆ ಪಾರ್ಟಿ ಹೆಸರಿನ ಹುಚ್ಚಾಟ ನಡೆದೇ ಇರುತ್ತದೆ.
ಬಹುತೇಕ ನೈಟ್‌ಪಾರ್ಟಿಗಳು ಸಿನಿಮಾ-ಕ್ರಿಕೆಟ್
ಮಂದಿ, ಪ್ರಭಾವಿಗಳೊಂದಿಗೆ ತಳುಕು
ಹಾಕಿಕೊಂಡಿರುವುದರಿಂದ ಪೊಲೀಸ್ ಕಟ್ಟುನಿಟ್ಟು ಅಷ್ಟೇನೂ ಇಲ್ಲ.
ಪಾರ್ಟಿ ಪ್ರಿಯರಿಗೆ ಪೊಲೀಸರಿಗಿಂತ ಶಿವಸೇನೆ
ಭಯವೇ ಹೆಚ್ಚು!
ನವದೆಹಲಿ
ಮಧ್ಯರಾತ್ರಿ 1
ಗಂಟೆವರೆಗೆ ಡ್ಯಾನ್ಸ್‌ಬಾರ್ ನಡೆಸಲು ಅನುಮತಿ ಇದೆ.
ಬೆಂಗಳೂರಿನಲ್ಲಿ ರಾತ್ರಿ 11.30ಕ್ಕೆ
ಪಬ್, ಬಾರ್‌ಗಳ ಆಮೋದ-ಪ್ರಮೋದ
ಮುಗಿಸಿ ಕಾರ್‌ಗಳ ಹೊರ ಹೊರಟರೆ,
ದೆಹಲಿಯಲ್ಲಿ ಅದು ವ್ಯತಿರಿಕ್ತ. ಅಲ್ಲಿ
ಪಾರ್ಟಿ ರಂಗೇರುವುದು ರಾತ್ರಿ 11.30ರ
ನಂತರವೇ. ಮಧ್ಯರಾತ್ರಿ
12 ಆದರೂ ಪಬ್‌ಗಳತ್ತ ಬರುವ ಕಾರ್‌ಗಳ
ಸಂಖ್ಯೆ ಹೆಚ್ಚುತ್ತಲೇ ಇರುತ್ತವೆ. ಇನ್ನು
ಮಾದಕ ದ್ರವ್ಯಗಳ ವಿಚಾರದಲ್ಲಂತೂ ದೆಹಲಿ ಪ್ರಮುಖ ಅಡ್ಡೆ.
ಚೆನ್ನೈ
ರಾತ್ರಿ 11ಕ್ಕೆ
ಡೆಡ್‌ಲೈನ್. ಪೊಲೀಸರ ಕಟ್ಟುನಿಟ್ಟಾದ
ಕ್ರಮದಿಂದಾಗಿ ರಾತ್ರಿ ಮೋಜಿಗೆ ಕಡಿವಾಣ ಬಿದ್ದಿದೆ.
ಬಹುತೇಕ ನೈಟ್ ಕ್ಲಬ್‌ಗಳನ್ನು ವೈಭವೋಪೇತ ಹೋಟೆಲ್‌ಗಳಲ್ಲಿ
ಆಯೋಜಿಸಲಾಗಿರುತ್ತದೆ. ಇವುಗಳಲ್ಲಿ
ಡ್ರೆಸ್‌ಕೋಡ್
ಕೂಡಾ ಇರುತ್ತದೆ.
ಹೈದರಾಬಾದ್
ರಾತ್ರಿ 11
ಗಂಟೆಯವರೆಗಷ್ಟೇ ಪಬ್ ತೆರೆಯಲು ಅನುಮತಿ.
ಇತರ ಮೆಟ್ರೋ ನಗರಿಗಳಿಗೆ ಹೋಲಿಸಿದರೆ ಹೈದರಾಬಾದ್‌ನಲ್ಲಿ ನೈಟ್ ಪಾರ್ಟಿ ಗಳ
ಹುಚ್ಚಾಟ ಅಷ್ಟೇನೂ ಇಲ್ಲ.
ಮಂಗಳೂರು-ಮಣಿಪಾಲ
ಮಧ್ಯರಾತ್ರಿ 11.30ರವರೆಗೆ
ಪಬ್, ಬಾರ್ ನಡೆಸಲು ಅನುಮತಿ ಇದೆ.
ಆದರೆ ಕೆಲವು ಪಬ್‌ಗಳಲ್ಲಿ ಬೆಳಗಿನ ಜಾವ 2ರಿಂದ
3ರವರೆಗೆ ಮೋಜಿನಾಟ ನಡೆಯುತ್ತದೆ.
ಶಿಕ್ಷಣ ಕೇಂದ್ರಗಳಾಗಿರುವುದರಿಂದ ಉತ್ತರ ಭಾರತೀಯ ವಿದ್ಯಾರ್ಥಿಗಳು
ಹೆಚ್ಚು. ರಾತ್ರಿ ಪಾರ್ಟಿಗಳಿಗೆ ಹೆಚ್ಚು
ಭಾಗವಹಿಸುವವರೂ ಅವರೇ. ದಾಂಧಲೆ
ನಡೆಸುತ್ತಾರೆಂಬ ಕಾರಣದಿಂದ ಸ್ಥಳೀಯರಿಗೆ ಕೆಲವು ಪಬ್‌ಗಳು ನಿಷೇಧ
ಹೇರಿರುವುದೂ ಉಂಟು. ಇಲ್ಲಿನ ಪಬ್‌ಗಳು
ಸಾಂದರ್ಭಿಕವಾಗಿ ವಿದೇಶಿ ಡಿಜೆಗಳನ್ನೂ
ಆಮಂತ್ರಿಸಿ ಪಾರ್ಟಿ ಆಯೋಜಿಸುವುದುಂಟು.
ಟಿಎಸ್‌ಐ
|