ಜಾಗತಿಕ ರಾಜಕಾರಣದಲ್ಲಿ ಅಮೆರಿಕಕ್ಕೆ ವಿಶಿಷ್ಟ
ಸ್ಥಾನ. ಅಭಿವೃದ್ಧಿಯೆಡೆಗೆ ದಾಪುಗಾಲಿಡುವ
ಸಂದರ್ಭದಲ್ಲಿ ಕೆಲವು ರಾಷ್ಟ್ರಗಳ ಬುದ್ಧಿವಂತ ರಾಜಕಾರಣಿಗಳು ಅಮೆರಿಕದೊಂದಿಗೆ
ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾ ತಮ್ಮ ಜನತೆಯ ಬೆಂಬಲ,
ಅನುಕಂಪ ಎರಡನ್ನೂ ಸಂಪಾದಿಸಿದರು.
ಹಾಗೆಯೇ ಅಮೆರಿಕ ವಿರೋಧಿ ಭಾವನೆ ಎಲ್ಲೆಡೆ ಇದ್ದಾಗ ಅದನ್ನೂ ತಮ್ಮ ರಾಜಕೀಯ
ಬೆಳವಣಿಗೆಗೆ ಉಪಯೋಗಿಸಿಕೊಳ್ಳುವವರಿಗೂ ಕೊರತೆ ಇಲ್ಲ.
ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ,
ಪ್ರಪಂಚದಲ್ಲಿ ಮತ್ತು ಸ್ವತಃ ಅಮೆರಿಕದಲ್ಲಿ ಅಮೆರಿಕ
ವಿರೋಧಿ ಅಲೆಯಿಂದಾಗಬಹುದಾದ ಪರಿಣಾಮದ ಕುರಿತು
ಅಸಂಖ್ಯಾತ ಸಂಶೋಧನೆಗಳಾಗಿವೆ, ಜೊತೆಗೆ ಮಾಧ್ಯಮ
ವಿಶ್ಲೇಷಣೆಗಳೂ ಬಂದಿವೆ. ಆದರೆ ಅಮೆರಿಕ ವಿರೋಧಿ
ಭಾಷಣಗಳು ಮತ್ತು ಹೇಳಿಕೆಗಳು ಜಗತ್ತಿನ ಬಹಳಷ್ಟು ರಾಷ್ಟ್ರಗಳ ಚುನಾವಣೆಗಳಲ್ಲಿ
ಮತಗಳನ್ನು ಸೆಳೆಯುವ ತಂತ್ರಗಳಾಗಿ ಬಳಕೆಯಾಗುತ್ತಿವೆ ಎನ್ನುವ ವಿಚಾರ ಮಾತ್ರ
ಅಷ್ಟಾಗಿ ಮಾಧ್ಯಮಗಳ, ರಾಜಕೀಯ ವಿಶ್ಲೇಷಕರ ಗಮನ
ಸೆಳೆದಂತಿಲ್ಲ.
ಅಮೆರಿಕ ವಿರೋಧಿ ಸಿದ್ಧಾಂತ ಜಗತ್ತಿನ ಬೇರೆ
ಯಾವುದೇ ಭಾಗಕ್ಕಿಂತ ಹೆಚ್ಚಾಗಿ ಪಶ್ಚಿಮ ಯೂರೋಪ್‌ನ ಕೆಲವೊಂದು ರಾಷ್ಟ್ರಗಳು,
ಲ್ಯಾಟಿನ್ ಅಮೆರಿಕ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರಬಲವಾಗಿದೆ.
9/11 ಘಟನೆ, ಜಾಗತಿಕ ಸಾಮೂಹಿಕ ನಾಶದ
(ಡಬ್ಲ್ಯೂಎಂಡಿ)
ವಿರುದ್ಧದ ಅಮೆರಿಕದ ನಡೆ, ಆ
ಹಿನ್ನೆಲೆಯಲ್ಲಿ ನಡೆದ ಇರಾಕ್ ಮತ್ತು ಅಫ್ಘಾನಿಸ್ತಾನಗಳ ಮೇಲಿನ ಆಕ್ರಮಣ
ಮುಂತಾದ ಕಾರಣಗಳಿಂದಾಗಿ ಫ್ರಾನ್ಸ್, ಜರ್ಮನಿ,
ಪಾಕಿಸ್ತಾನ, ಇರಾನ್,
ದಕ್ಷಿಣ ಕೊರಿಯ, ಅರ್ಜೆಂಟೀನಾ
ದೇಶಗಳಲ್ಲಿ ಅಮೆರಿಕ ವಿರೋಧಿ ಭಾವನೆ ದಿನೇ-
ದಿನೇ ಹೆಚ್ಚುತ್ತಿದೆ. ದೇಶದಲ್ಲಿ ಹಬ್ಬಿರುವ
ಅಮೆರಿಕ ವಿರೋಧಿ ಅಲೆಯನ್ನು ತಮ್ಮ ಮತಸಂಖ್ಯೆ ಹೆಚ್ಚಿಸಿಕೊಳ್ಳಲು ಅಲ್ಲಿನ
ರಾಜಕಾರಣಿಗಳು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ.
ಇದಕ್ಕೆ ಸೂಕ್ತ ಉದಾಹರಣೆಯೆಂದರೆ,
ದಕ್ಷಿಣ ಕೊರಿಯಾದ ರೊ ಮೂ-ಹೆನ್.
೨೦೦೨ರ ಚುನಾವಣೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಮೂ-ಹೆನ್
ಅಮೆರಿಕ ವಿರೋಧಿ ಚಳವಳಿಗೆ ಬಹಿರಂಗ ಬೆಂಬಲ ನೀಡುವ ಮೂಲಕ ದಿನ ಬೆಳಗಾಗುವುದರಲ್ಲಿ
ಜನಪ್ರಿಯತೆಯ ಉತ್ತುಂಗಕ್ಕೇರಿದ್ದರು ಮತ್ತು ಅದೇ ಅಲೆಯಲ್ಲಿಯೇ ಅಧಿಕಾರಕ್ಕೆ
ಬರುವುದರಲ್ಲಿ ಯಶಸ್ವಿಯಾಗಿದ್ದರು.
ಮತ್ತೊಂದು ಉದಾಹರಣೆಯೆಂದರೆ,
ಉಕ್ರೇನ್ ದೇಶದ್ದು. ಶೀತಲ ಸಮರ
ಸಂದರ್ಭದಲ್ಲಿ ರಷ್ಯಾ ಉಕ್ರೇನ್‌ನಲ್ಲಿ ಬಿತ್ತಿದ್ದ ಅಮೆರಿಕ ವಿರೋಧಿ ಬೀಜ ಈಗ
ಬೆಳೆದು ಹೆಮ್ಮರವಾಗಿದೆ. ಇಲ್ಲಿನ ಅಮೆರಿಕ
ವಿರೋಧಿ ಪ್ರತಿಭಟನೆಗಳು ಕೆಲವೊಮ್ಮೆ ಹಿಂಸಾತ್ಮಕ ರೂಪ ತಾಳಿದ ಉದಾಹರಣೆಗಳೂ ಇವೆ.
೨೦೦೪ರ ಅಧ್ಯಕ್ಷೀಯ ಚುನಾವಣೆ ಕೂಡ ಇದಕ್ಕೆ ಹೊರತಾಗಿರಲಿಲ್ಲ.
೨೦೦೩ರಲ್ಲಿ ನಡೆದ ಸ್ಪೇನ್‌ನ ಸ್ಥಳೀಯ ಚುನಾವಣೆಗಳಲ್ಲಿ ಬಹಳಷ್ಟು ಜನ
ರಾಜಕಾರಣಿಗಳು ಅಮೆರಿಕ ವಿರೋಧಿ ಸಿದ್ಧಾಂತವನ್ನು ಪಠಿಸುವ ಮೂಲಕವೇ ತಮ್ಮ ಜನ
ಬೆಂಬಲವನ್ನು ಹೆಚ್ಚಿಸಿಕೊಂಡಿದ್ದರು.
ವೆನಿಜ್ಯುವೆಲಾದ ಹ್ಯೂಗೋ ಶಾವೆಜ್, ಇರಾನ್
ಅಧ್ಯಕ್ಷ ಮಹಮದ್ ಅಹಮದಿನೇಜಾದ್, ಸೂಡಾನ್‌ನ
ಓಮರ್ ಹಸನ್ ಅಹ್ಮದ್ ಬಷೀರ್ ಮುಂತಾದ ನಾಯಕರು ಪತ್ರಿಕೆಗಳ ಮುಖಪುಟಗಳನ್ನು
ಅಲಂಕರಿಸಿದ್ದು ಅಮೆರಿಕ ಮತ್ತು ಅಧ್ಯಕ್ಷ ಬುಶ್ ಅವರನ್ನು ಕುರಿತ ಬಹಿರಂಗ
ವಿರೋಧಿ ಹೇಳಿಕೆಗಳಿಂದಲೇ ಎನ್ನುವುದು ಗಮನಾರ್ಹ.
ಒಂದು ಸಮೀಕ್ಷೆಯ ಪ್ರಕಾರ ಮೊರೊಕ್ಕೋ,
ಜೋರ್ಡಾನ್, ಪಾಕಿಸ್ತಾನ,
ಟರ್ಕಿ ಮುಂತಾದ ಮುಸ್ಲಿಂ ಬಾಹುಳ್ಯವಿರುವ ರಾಷ್ಟ್ರಗಳಲ್ಲಿ ಅಮೆರಿಕ
ದ್ವೇಷ ಪ್ರಬಲವಾಗಿದೆ. ಜೊತೆಗೆ ಅದು ಅಲ್ಲಿನ
ಚುನಾವಣೆಗಳ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅಮೆರಿಕ ತಾನು ಕಳೆದುಕೊಂಡಿರುವ ಹಿಂದಿನ
ಪ್ರತಿಷ್ಠೆ, ಪ್ರಭಾವವನ್ನು ಪುನಃ
ಸಂಪಾದಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನಿಸುತ್ತಿದೆ.
ಅದು ತನ್ನ ಮಿತ್ರ ರಾಷ್ಟ್ರಗಳಿಗೆ ನೀಡುತ್ತಿರುವ ಹಣಕಾಸಿನ ಸಹಕಾರ
ಹೆಚ್ಚುತ್ತಲೇ ಇದೆ. ಈ ರಾಷ್ಟ್ರಗಳ
ರಾಜಕಾರಣಿಗಳಲ್ಲಿ ಅದೇನೇ ಭಿನ್ನತೆಗಳಿರಲಿ ಒಂದು ವಿಚಾರದಲ್ಲಿ ಮಾತ್ರ
ಅವರೆಲ್ಲರೂ ಸಮಾನ ವ್ಯಸನಿಗಳು.
ಅದೇನೆಂದರೆ ಅವರೆಲ್ಲರಿಗೂ ತಮ್ಮ ಗಾದಿಯನ್ನು ಭದ್ರಪಡಿಸಿಕೊಳ್ಳಲು ಒಂದು
ವಿಚಾರ ಬೇಕು. ಆ ವಿಚಾರ ಅಮೆರಿಕ ಪರ ಇರಬಹುದು
ಅಥವಾ ಅಮೆರಿಕ ವಿರೋಧಿ ಇರಬಹುದು. ಈ ನಾಯಕರು
ಸಮಯಕ್ಕೆ ತಕ್ಕಂತೆ ಎರಡೂ ಪಾಳೆಯದಲ್ಲಿ ಕಾಣಿಸಿಕೊಳ್ಳುತ್ತಾರೆ.
ಇಂದು ಅಮೆರಿಕ ವಿರೋಧಿ, ನಾಳೆ ಅಮೆರಿಕ
ಪರ. ನಂತರ?
ನೀವೇ ಊಹಿಸಿ....
ಐಐಪಿಎಂ
'ಥಿಂಕ್ ಟ್ಯಾಂಕ್
ಅಕ್ರಂ ಹಕ್
ಭಯೋತ್ಪಾದನೆ: ಸಾಮರಸ್ಯ
ಕೇಂದ್ರ- ರಾಜ್ಯಗಳ ನಡುವೆ ಅಪನಂಬಿಕೆ
ಒಕ್ಕೂಟ ರಾಜ್ಯಗಳು ಕೇಂದ್ರದಲ್ಲಿ ನಂಬಿಕೆ ಕಳೆದುಕೊಳ್ಳುತ್ತಿರುವುದು ಶುಭಸೂಚನೆಯಲ್ಲ
ಇತ್ತೀಚಿಗೆ ನಡೆದ ಭಯೋತ್ಪಾದಕ ದಾಳಿಗಳು ನಮ್ಮ
ವ್ಯವಸ್ಥೆಯಲ್ಲಿಯೇ ಅಂತರ್ಗತವಾಗಿರುವ ಎರಡು ಬಗೆಯ ವಿರೋಧಾಭಾಸಗಳ ಮೇಲೆ ಬೆಳಕು
ಚೆಲ್ಲಿವೆ. ಮೊದಲನೆಯದಾಗಿ,
ಅದು ನಮ್ಮ ಹೆಮ್ಮೆಯ ಒಕ್ಕೂಟ ವ್ಯವಸ್ಥೆ ಬಲವನ್ನು ಎತ್ತಿಹಿಡಿದರೆ,
ಮತ್ತೊಂದೆಡೆ ಆ ವ್ಯವಸ್ಥೆಯ ಕುರಿತು ಅನುಮಾನಗಳನ್ನೂ ಹುಟ್ಟುಹಾಕಿದೆ.
ಇತ್ತ ಕೇಂದ್ರ ಸರ್ಕಾರ ಭಯೋತ್ಪಾದನಾ ವಿರೋಧಿ ಏಜೆನ್ಸಿಯನ್ನು
ಸ್ಥಾಪಿಸಲು ಮೀನ- ಮೇಷ ಎಣಿಸುತ್ತಿದ್ದರೆ,
ಅತ್ತ ರಾಜ್ಯ ಸರ್ಕಾರಗಳು ಕೇಂದ್ರವನ್ನು ನೆಚ್ಚಿ ಕೂರದೆ ಭಯೋತ್ಪಾದನೆ
ನಿಗ್ರಹಿಸುವ ಸಲುವಾಗಿ ತಮ್ಮದೇ ಆದ ಭಯೋತ್ಪಾದನಾ ನಿಗ್ರಹ ದಳವನ್ನು
(ಎಟಿಎಸ್)
ಸ್ಥಾಪಿಸುವ ಮತ್ತು ಬಲಗೊಳಿಸುವ ನಿಟ್ಟಿನಲ್ಲಿ ಸಕ್ರಿಯವಾಗಿವೆ.
ಭಯೋತ್ಪಾದನಾ ಚಟುವಟಿಕೆಗಳ ನಿಯಂತ್ರಣ ಮಾತ್ರವಲ್ಲ,
ಕೇಂದ್ರದ ಗುಪ್ತಚರ ಇಲಾಖೆಯನ್ನು ಅವಲಂಬಿಸದೆ ತಮ್ಮದೇ ಆದ ಒಂದು
ಭಯೋತ್ಪಾದನಾ ನಿಗ್ರಹ ವ್ಯವಸ್ಥೆಯನ್ನು ಹೊಂದುವುದು ಇದರ ಉದ್ದೇಶ.
ಈಗಾಗಲೇ, ವಿಶೇಷ ಕಾರ್ಯ ಪಡೆ
(ಎಸ್‌ಟಿಎಫ್)
ಹೊಂದಿರುವ ಉತ್ತರ ಪ್ರದೇಶ ಸಂಘಟಿತ ಅಪರಾಧಗಳನ್ನು ಹತ್ತಿಕ್ಕುವ
ಸಲುವಾಗಿ ಭಯೋತ್ಪಾದನಾ ನಿಗ್ರಹ ದಳವನ್ನು ಸ್ಥಾಪಿಸಿದೆ.
ಗುಜರಾತ್, ಮಹಾರಾಷ್ಟ್ರ,
ದೆಹಲಿ ಮತ್ತು ಆಂಧ್ರಪ್ರದೇಶ ಮುಂತಾದ ರಾಜ್ಯಗಳಿಂದ ಉತ್ತೇಜಿತಗೊಂಡ
ಮಧ್ಯಪ್ರದೇಶ ತನ್ನದೇ ಆದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)
ಸ್ಥಾಪಿಸಿದೆ. ಕಾಕತಾಳೀಯವೆಂದರೆ
ಮಧ್ಯಪ್ರದೇಶ ಕೂಡ ಉತ್ತರಪ್ರದೇಶದಂತೆ ತನ್ನದೇ ಆದ ವಿಶೇಷ ಕಾರ್ಯ ಪಡೆಯನ್ನು
(ಎಸ್‌ಟಿಎಫ್)
ಹೊಂದಿದ್ದು ಅದು ಸಿಮಿಯ
ಮಾಸ್ಟರ್ ಮೈಂಡ್
ನಫ್ದಾರ್ ನಾಗೋರಿಯನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಪಶ್ಚಿಮ ಬಂಗಾಳ ಕೂಡಾ ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕುವ
ನಿಟ್ಟಿನಲ್ಲಿ ವಿಶೇಷ ಕಾರ್ಯ ಪಡೆ (ಎಸ್‌ಟಿಎಫ್)
ಸ್ಥಾಪಿಸುತ್ತಿದೆ. ತಮಿಳುನಾಡು
ಪೊಲೀಸ್‌ನ ಕ್ಯೂ
ವಿಭಾಗ ಮತ್ತು ರಾಜಸ್ಥಾನದ ವಿಶೇಷ ಕಾರ್ಯಾಚರಣೆ ತಂಡ
(ಸ್ಪೆಷಲ್ ಆಪರೇಷನಲ್ ಗ್ರೂಪ್)
ಈ ನಿಟ್ಟಿನಲ್ಲಿ ಮುನ್ನಡೆಯುತ್ತಿವೆ.
ಇನ್ನು ಭಯೋತ್ಪಾದಕ ಕೃತ್ಯಗಳಿಗೆ ಹೆಸರಾದ
ಜಮ್ಮು-ಕಾಶ್ಮೀರ,
ಪಂಜಾಬ್ ಮತ್ತು ಈಶಾನ್ಯ ರಾಜ್ಯಗಳು ಆತಂಕವಾದಿಗಳಿಂದ ತಮ್ಮನ್ನು ತಾವು
ರಕ್ಷಿಸಿಕೊಳ್ಳಲು ತಮ್ಮದೇ ಆದ ಮಾರ್ಗಗಳನ್ನು ಕಂಡುಕೊಂಡಿವೆ ಎಂಬುದನ್ನು
ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇತ್ತೀಚಿಗೆ
ಅಹಮದಾಬಾದ್‌ನಲ್ಲಿ ನಡೆದ ಭಯೋತ್ಪಾದನಾ ಕೃತ್ಯದ ತನಿಖೆಯ ಸಂದರ್ಭದಲ್ಲಿ
ರಾಜ್ಯಗಳು ಪರಸ್ಪರ ಕೈ ಜೋಡಿಸಿ ಆ ಕೃತ್ಯದ ಹಿಂದಿದ್ದ ಅಪರಾಧಿಗಳನ್ನು
ಬಂಧಿಸಲು ನೆರವಾಗಿದ್ದವು.
ಒಕ್ಕೂಟಗಳಲ್ಲಿರುವ ರಾಜ್ಯಗಳಿಗೆ ದೂರದೃಷ್ಟಿ ಇಲ್ಲ ಎಂಬ ಆಪಾದನೆಗಳ ಮಧ್ಯೆ
ಭಯೋತ್ಪಾದನಾ ನಿಗ್ರಹ ಸಂಬಂಧಿ ಸಹಕಾರ ಭಾರತೀಯ ಒಕ್ಕೂಟ ವ್ಯವಸ್ಥೆಯ
ಪ್ರಬುದ್ಧತೆಗೆ ಕನ್ನಡಿ ಹಿಡಿಯುತ್ತದೆ.
ಅಷ್ಟೇ ಅಲ್ಲ, ರಾಜ್ಯಗಳ ನಡುವೆ ಸಹಕಾರ ಮತ್ತು
ಒಮ್ಮತದ ಕೊರತೆ ಇದೆ ಎಂಬ ಕಾರಣ ನೀಡಿ ಫೆಡರಲ್ ಏಜನ್ಸಿಯನ್ನು ಸ್ಥಾಪಿಸಲು
ಹಿಂದೇಟು ಹಾಕುತ್ತಿದ್ದ ಕೇಂದ್ರ ಸರ್ಕಾರಕ್ಕೆ ಈ ರಕ್ಷಣಾ ಸಹಕಾರದಿಂದ
ಮುಖಭಂಗವಾದಂತಾಗಿದೆ. ರಾಜ್ಯಗಳ ನಡುವಿನ
ಪರಸ್ಪರ ಸಹಕಾರ ಒಕ್ಕೂಟ ವ್ಯವಸ್ಥೆ ಪ್ರಬುದ್ಧತೆ ಸಾಧಿಸಿರುವ ಸಂಕೇತವಾದರೆ,
ಅವುಗಳ ದೆಹಲಿ ಕುರಿತ ಅವಿಶ್ವಾಸ ಭಾರತದ ಭವಿಷ್ಯದ ದೃಷ್ಟಿಯಿಂದ
ಅಷ್ಟೊಂದು ಶುಭಸೂಚನೆಯಲ್ಲ.
ಭಾರತ ಒಕ್ಕೂಟ ವ್ಯವಸ್ಥೆ ತನ್ನ
ಪ್ರಬುದ್ಧತೆಯನ್ನು ಮೆರೆಯುತ್ತಿರುವ ಸಂದರ್ಭದಲ್ಲಿಯೇ ಅದರ ಕರಾಳ ಮುಖವೊಂದು
ಅನಾವರಣಗೊಳ್ಳುತ್ತಿದೆ. ಕೆಲವರು
ಸಿಮಿ
ಕಾರ್ಯಕರ್ತರ ಬಂಧನವನ್ನು ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ
ದೌರ್ಜನ್ಯ ಎಂಬಂತೆ ಬಿಂಬಿಸುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಕೂಡ ಕೇಂದ್ರ ಸರ್ಕಾರ ತುಟಿ ಬಿಚ್ಚುವುದಿಲ್ಲ.
ಇಂತಹ ಸಂದಿಗ್ಧತೆಯಲ್ಲಿ ನಮ್ಮ ನೆರವಿಗೆ ಬರುವುದು ಮುಕ್ತ ಸಂವಾದ.
ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಎಂಬುದನ್ನು ಸ್ಪಷ್ಟ
ಮಾತುಗಳಲ್ಲಿ ಜನತೆಗೆ ತಲುಪಿಸಬೇಕು.
ಮಾವೋವಾದ ಅಥವಾ ಉಲ್ಫಾ
ಉಗ್ರಗಾಮಿಗಳು ಮತ್ತು ಖಲಿಸ್ತಾನ ಚಳವಳಿಯನ್ನು ಹತ್ತಿಕ್ಕಲು
ಸ್ಥಾಪಿಸಲಾದ ಬಹುಪ್ರತಿಷ್ಠಿತ ಸೇನಾ ತುಕಡಿಗಳಾದ ಕೋಬ್ರಾ
ಮತ್ತು ಇಂಡಿಯಾ ರಿಸರ್ವ್ ಬೆಟಾಲಿಯನ್‌ಗಳು ಕೂಡ ಭಯೋತ್ಪಾನೆಯ
ವಿರುದ್ಧ ಹೋರಾಡುತ್ತಿವೆ. ಗಮನಿಸಬೇಕಾದ
ಅಂಶವೆಂದರೆ, ಆ ಉಗ್ರಗಾಮಿಗಳಲ್ಲಿ
ಬಹುಸಂಖ್ಯಾತರು ಮುಸ್ಲಿಂ ಸಮುದಾಯದವರಲ್ಲ ಬದಲಿಗೆ ಹಿಂದೂಗಳು.
ಭಯೋತ್ಪಾದನೆ ವಿರುದ್ಧದ ಹೋರಾಟ ಯಾವುದೇ ಧರ್ಮದ ವಿರುದ್ಧವಲ್ಲ,
ಬದಲಿಗೆ ವಿನಾಶಕಾರಿ ಶಕ್ತಿಗಳ ವಿರುದ್ಧ ಎಂಬುದಕ್ಕೆ ಇದು ಉತ್ತಮ
ಉದಾಹರಣೆ. ಇನ್ನು ಮುಂದಾದರೂ ರಾಜಕೀಯ
ಇಚ್ಛಾಶಕ್ತಿಯನ್ನು ಮೈಗೂಡಿಸಿಕೊಂಡು ಪರಿಣಾಮಕಾರಿ ಕಾರ್ಯದ ಮೂಲಕ ದೇಶದ
ಸಮಗ್ರತೆ ಕಾಪಾಡುವ ಹೊಣೆ ಕೇಂದ್ರ ಸರ್ಕಾರದ್ದು.
ಐಐಪಿಎಂ
'ಥಿಂಕ್ ಟ್ಯಾಂಕ್'
ಪಥಿಕೃತ್ ಪಾಯ್ನೆ