Hollywood, Bolllywood and Sandalwood.

"> The Sunday Indian - Kannada


ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಬಣ್ಣದ ಲೋಕ
 
 

ವಿದ್ಯಾಳ ‘ಮಾರಕ’ ಕುಚೋದ್ಯ!

ಈಗಂತೂ ವಿದ್ಯಾ ಬಾಲನ್ ಗಟ್ಟಿಯಾಗಿ ಸೀನಿದರೂ ಸುದ್ದಿಯಾಗೋ ಸ್ಥಿತಿ! ವಿನಾಕಾರಣ ಸುದ್ದಿಗೆ ಆಹಾರವಾಗಬಾರದು ಎಂದು ಆಕೆ ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಸಾಜಿದ್ ಖಾನ್ ನಡೆಸಿಕೊಡುವ ಟಿವಿ ಸಂದರ್ಶನದಲ್ಲಿ ಚಿಕ್ಕವಳಿದ್ದಾಗ ಶಾರುಖ್ ಖಾನ್ ಮೇಲೆ ತನಗಿದ್ದ ಮೋಹದ ಬಗ್ಗೆ ಹೇಳಿಕೊಂಡಳು ವಿದ್ಯಾ. ಆಗ "ಗೌರಿ ಈ ಶೋ ನೋಡ್ತಿದಾಳೆ" ಎಂದು ಸಾಜಿದ್ ತಮಾಷೆ ಮಾಡಿದ್ದೇ, ವಿದ್ಯಾ ಕುಚೋದ್ಯದಿಂದ "ಆಕೆಯನ್ನು ಕೊಲೆ ಮಾಡಿ" ಎಂದಳು. ಮಾಧ್ಯಮಗಳಿಗೆ ಇಷ್ಟೇ ಸಾಕಾಯ್ತು ನೋಡಿ. ’ಗೌರಿ ಖಾನ್‌ಳನ್ನು ಕೊಲ್ಲ ಬಯಸುವ ವಿದ್ಯಾ ಬಾಲನ್’ ಎಂದು ಎಲ್ಲೆಡೆ ಗಾಸಿಪ್ಪೇ ಗಾಸಿಪ್. ಲೇ ವಿದ್ಯಾ.. ಇನ್ನು ಏನೇ ಮಾತನಾಡಿದ್ರು ಸ್ವಲ್ಪ ಅತ್ತಿತ್ತ ನೋಡ್ಕೊಂಡು ಮಾತಾಡಮ್ಮಾ...

ಚಿನ್ನದ ಹುಡುಗಿ

ಪಾರ್ಟಿ ಪ್ರಿಯೆ ಕೇಟ್ ಮೋಸ್ ಆದರ್ಶ ಸೌಂದರ್ಯ ಪುತ್ಥಳಿ! ಹೀಗೆಂದು ನಾವು ಹೇಳುತ್ತಿಲ್ಲ. ಮಾರ್ಕ್ ಕ್ವಿನ್ ಹೇಳುತ್ತಿದ್ದಾನೆ. ಅಷ್ಟೇ ಅಲ್ಲ, ಕಾರ್ಯರೂಪಕ್ಕೂ ತಂದಿದ್ದಾನೆ. ಈ ಹಿಂದೆ ಯೋಗ ಮುದ್ರೆಯಲ್ಲಿದ್ದ ಕೇಟ್‌ಳ ಕಂಚಿನ ಪ್ರತಿಮೆ ರಚಿಸಿದ್ದ ಕ್ವಿನ್ ಈಗ ೧.೫ ಮಿಲಿಯನ್ ಪೌಂಡ್ ಮೌಲ್ಯದ ಸ್ವರ್ಣ ಪ್ರತಿಮೆ ನಿರ್ಮಿಸಿದ್ದಾನೆ! ೫೦ ಕೆ.ಜಿ. ತೂಕವಿರುವ ಕೇಟ್ ಮೋಸ್‌ಳ ಈ ಚಿನ್ನದ ಪುತ್ಥಳಿಯನ್ನು ಅಕ್ಟೋಬರ್ ೪ರಿಂದ ಲಂಡನ್‌ನ ಕೇಂದ್ರ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗುವುದು. ಅಂದಹಾಗೆ ಕೇಟ್‌ಗೆ ಇಷ್ಟೆಲ್ಲಾ ಗೌರವ ಕೊಟ್ಟಿರೋ ಮಾರ್ಕ್ ಕ್ವಿನ್, ಆಕೆಯ ಜೀವನ ಶೈಲಿಯನ್ನು ಮಾತ್ರ ಬಿಲ್‌ಕುಲ್ ಒಪ್ಪಿಕೊಂಡಿಲ್ಲ. ಕೇಟ್ ತನ್ನ ಪ್ರತಿಮೆ ಹಾಗೂ ವರ್ಚಸ್ಸಿಗೆ ತಕ್ಕಂತೆ ಜೀವನ ನಡೆಸಿಲ್ಲ ಎಂದು ಆತ ಟೀಕಿಸಿದ್ದಾನೆ. ಆದರೆ ಕೇಟ್ ಸಂಭ್ರಮಾಚರಣೆಗೆ ಇದರಿಂದೇನೂ ಅಡ್ಡಿಯಾಗದು ಬಿಡಿ.

ಡಿಯರ್ರು... ಫಿಯರ್ರು!

’ಸಿಂಗ್ ಈಸ್ ಕಿಂಗ್’ ಭರ್ಜರಿ ಹಿಟ್ ಆದದ್ದೇ ತಡ, ಯಶಸ್ಸಿನ ಏರೋಪ್ಲೇನ್ ಮೇಲೆ ಡ್ಯಾನ್ಸ್ ಮಾಡ್ತಿದ್ದ ನಮ್ ಅಕ್ಷಯ್ ಕುಮಾರ್ ನಾಪತ್ತೆ? ಅರೆ ಎಲ್ಲಿ ಮಾಯವಾದ ಅಂತ ಗಾಬರಿಯಾದ್ರಾ...? ಎಲ್ಲೂ ಹೋಗಿಲ್ಲ ಬಿಡಿ. ಈ ಬಾಲಿವುಡ್ ’ಮಹಾರಾಜ’ ತನ್ನ ಸುಂದರ ಪತ್ನಿ ಟ್ವಿಂಕಲ್ ಜೊತೆ ಮೊಂಟೆಕಾರ್ಲೊ ಪ್ರವಾಸ ಹೋಗಿದ್ದ! ಆದರೆ ಟ್ವಿಂಕಲ್ ಮೊಗದಲ್ಲಿ ಮಾತ್ರ ನಗು ಮೂಡಿದರೆ ಸಾಕೆ? ಮುದ್ದಿನ ಮಗ ಆರವ್ ಬಿಡಬೇಕಲ್ಲ. ಎಷ್ಟಾದರೂ ‘ಕಿಂಗ್’ ಪುತ್ರ ಅಲ್ವೇ. ಸರಿ ಮತ್ತೊಂದು ವಾರ ಅಪ್ಪ-ಮಗ ಮೋಜು-ಮಸ್ತಿ ಅಂತ ಕುಣಿದೇ ಕುಣಿದರು. ಹೀಗೆ ಮಗ, ಪತ್ನಿ ಎಂದು ಸಮಯ ವಿಂಗಡಿಸೋದು ತಪ್ಪಾಗುತ್ತೆ. ಆದರೂ ಇಬ್ಬರಿಗೂ ಫುಲ್ ಟೈಮ್ ಮೀಸಲಿಟ್ಟೆ ಎಂದು ಪುರಾಣ ಬಿಗಿದ ಅಕ್ಷಯ್‌ಗೆ ಇಬ್ಬರ ಮೇಲೂ ಯದ್ವಾತದ್ವಾ ಪ್ರೀತೀನೋ ಅಥವಾ ಬೇರೇನಾದ್ರೂ ಭಯಾನೋ?! ಎಷ್ಟಂದ್ರೂ ’ಫಿಯರ್ ಫ್ಯಾಕ್ಟರ್’ ಕುಳ ಅಲ್ವೇ?!

ಏಕೆ ಹೀಗಾಯ್ತೋ...

ಶೆರಿಲ್ ಎಂಬ ಈ ಮಾದಕ ಚೆಲುವೆಯ ‘ದರ್ದ್’ ಕಥೆಯನ್ನೊಮ್ಮೆ ಕೇಳಿ. ಈ ಮಾದಕ ಬೆಡಗಿ ’ದರ್ದ್--ಶೆರಿಲ್’ ಎಂಬ ಹಾಟ್ ಹಾಟ್ ಆಲ್ಬಂ ಹೊರತಂದಳು. ಹೇಮಾ ಮಾಲಿನಿ ಅಭಿನಯದ ’ದಸ್ ನಂಬರಿ’ ಚಿತ್ರದ ’ದರ್ದ್’ ಗೀತೆಗೆ ಇದು ’ಗೌರವ ಸಮರ್ಪಣೆ’ ಎಂಬ ಕಂತೆ ಪುರಾಣ ಬೇರೆ! ಬಾಲಿವುಡ್ ಡ್ರೀಮ್‌ಗರ್ಲ್ ಈ ಸಮರ್ಪಣೆಯನ್ನು ಸ್ವೀಕರಿಸಿದರೆ ತಾನೆ? ಅಶ್ಲೀಲತೆ ಮಾರಲು ತನ್ನ ಹೆಸರು ಬಳಸಿಕೊಂಡ ಮಾಯಾಂಗನೆ ವಿರುದ್ಧ ಕಿಡಿ ಕಾರಿಯೇ ಬಿಟ್ಟಿದ್ದಾರೆ ಹೇಮಾ. ಏನೋ ಮಾಡಲು ಹೋಗಿ ಏನು ಮಾಡಿದೆ ನಾನು... ಅಂತ ಈಗ ಶೆರಿಲ್ ಎಲ್ಲರ ಬಳಿ ಗೋಳಾಡ್ತಿದ್ದಾಳೆ.

ಪೂಜಾ ತಮಿಳು ಮೋಹ

ತಮಿಳು ಎಂದರೆ ಸಾಕು, ನಾಯಕಿ ಪಾತ್ರವೇ ಬೇಕೆಂದಿಲ್ಲ ಎರಡನೇ ನಾಯಕಿ ಆದ್ರೂ ರೆಡಿ ಅನ್ನೋರ ಪಾಲಿಗೆ ನಮ್ ಸೋಣಿ ಕುಡಿ ಪೂಜಾಗಾಂಧಿ ಕೂಡ ಸೇರಬೇಕೆ? ಹೌದು ಕಣ್ರೀ, ಕನ್ನಡದಲ್ಲಿ ಅಷ್ಟುದ್ದ ಪಟ್ಟಿ ಮಾಡಬಹುದಾದ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಪೂಜಾ ಈಗ ತಮಿಳು ಚಿತ್ರ ‘ತಿರುವಣ್ಣಾಮಲೈ’ನಲ್ಲಿ ನಟಿಸಲು ಒಪ್ಪಿಕೊಂಡಿದ್ದಾಳೆ. ಮುಂಬೈ ಬೆಡಗಿ ತಾನಿಯಾ ವಕೀಲ್ ಮುಖ್ಯ ಪಾತ್ರದಲ್ಲಿರುವ ಈ ಸಿನಿಮಾದಲ್ಲಿ ಪೂಜಾಗೆ ಎರಡನೇ ನಾಯಕಿ ಪಟ್ಟ. ಇತ್ತೀಚೆಗಷ್ಟೇ ಕನ್ನಡದಲ್ಲಿ ‘ತಾಜ್‌ಮಹಲ್’ನಂತಹ ಚಿಂದಿ ಹಿಟ್ ನೀಡಿದ ಬಳಿಕವೂ ಇಂತಹ ದುಸ್ಸಾಹಸಕ್ಕೆ ಇಳಿದದ್ದು ಏಕೆ? ಪೂಜಾಳೇ ಉತ್ತರಿಸಬೇಕು...

ಲಂಬೂ ಜೋಡಿ ರೇಖಾ

ನಮ್ ಒರಿಜಿನಲ್ ಜಿಂಕೆಮರಿ ರೇಖಾ ಅಂತೂ ಇಂತೂ ಸೋಲಿನ ಸುಳಿಯಿಂದ ಹೊರ ಬರೋ ಹಾಗಾಗಿದೆ. ‘ಗುಣವಂತ’, ‘ಹೆತ್ತರೆ ಹೆಣ್ಣನ್ನೇ ಹೆರಬೇಕು’ ಸೋಲಿನಿಂದ ಕೆಂಗೆಟ್ಟಿದ್ದ ರೇಖಾಗೆ ತಂಪೆರೆದಿದ್ದು ‘ಹುಡುಗಾಟ’ ಮತ್ತು ‘ಆಕ್ಸಿಡೆಂಟ್’ ಯಶಸ್ಸು. ಹಾಗೇ ಪಕ್ಕದ ತೆಲುಗಿನಲ್ಲಿ ‘ಆನಂದಮ್’ ಹಿಟ್ ಚಿತ್ರ ನೀಡಿದ ಈ ಬಳುಕಿನ ಬಳ್ಳಿ ‘ಬಾಸ್’ ಚಿತ್ರದಲ್ಲಿ ದರ್ಶನ್‌ಗೆ ಜೋಡಿ! ಅಯ್ಯೋ ಇವರಿಬ್ಬರ ಹೈಟೋ, ಎತ್ತಣಿಂದೆತ್ತ ಜೋಡಿ ಎಂದುಕೊಂಡಿರಾ? ಸ್ವಾಮಿ.. ‘ಗಜ’ ಚಿತ್ರವನ್ನು ನೆನಪಿಸಿಕೊಳ್ಳಿ. ಮೂರೂವರೆ ಅಡಿ ಉದ್ದದ ನವ್ಯಾ ನಾಯರ್ ಲಂಬೂ ದರ್ಶನ್‌ಗೆ ಜೋಡಿಯಾಗಿಲ್ಲವೆ? ಚಿತ್ರಾನೂ ಸೂಪರ್ ಹಿಟ್ ಆಗಿ ದರ್ಶನ್‌ಗೆ ಪುನರ್ಜನ್ಮ ಸಿಕ್ತಪ್ಪಾ. ವಿಷ್ಯಾ ಏನಂದ್ರೆ... ‘ಬಾಸ್’ನ ಮತ್ತೊಂದು ನಾಯಕಿ ಪಟ್ಟದಲ್ಲಿ ಈಗಾಗ್ಲೇ ನವ್ಯಕ್ಕಾ ಇದಾರೆ!

ಪರಭಾಷಾ ಕನ್ನಡತಿ!!

ಮತ್ತೊಬ್ಬ ಪರಭಾಷಾ... ಕ್ಷಮಿಸಿ ಕ್ಷಮಿಸಿ... ಕನ್ನಡ ನಟಿ ಪರಭಾಷೆಯಿಂದ ಸ್ಯಾಂಡಲ್‌ವುಡ್‌ಗೆ ಬಂದಿದ್ದಾಳೆ! ಈ ಬೆಡಗಿ ಹೆಸರು ವೇದಿಕಾ. ‘ಸಂಗಮ’ದಲ್ಲಿ ಗಣೇಶನಿಗೆ ನಾಯಕಿ. ಚಿತ್ರಜೀವನದಲ್ಲೇ ಅತ್ಯುತ್ತಮ ಪಾತ್ರ ಕನ್ನಡದಲ್ಲಿ ಸಿಕ್ಕಿದೆ ಎಂದು ಬಾಯ್ತುಂಬಾ ಹೇಳಿಕೊಂಡಿರೋ ವೇದಿಕಾ ಕಳೆದ ಎರಡು ವರ್ಷಗಳಲ್ಲಿ ತಮಿಳು- ತೆಲುಗು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾಕೆ. ದಕ್ಷಿಣದ ಚಿತ್ರಗಳಿಗೆ ಬರೋ ಮೊದಲು ಮುಂಬೈನಲ್ಲಿ ಜಾಹೀರಾತು, ಆಲ್ಬಂಗಳೆಂದು ಬ್ಯುಸಿಯಾಗಿದ್ದ ವೇದಿಕಾ ಹುಟ್ಟೂರು ಮಹಾರಾಷ್ಟ್ರದ ಗಡಿ. ಮುಂಬೈಗೆ ಹೋದ ಕೂಡಲೇ ಕನ್ನಡ ಮರೆತು ಹೋಗೋ ನಟಿಯರ ಪಟ್ಟಿಯಲ್ಲಿ ಸೇರಿಲ್ಲ ಈಕೆ. "ನಾನು ಮುಂಬೈನಲ್ಲಿ ನೆಲೆಸಿದ ಕನ್ನಡತಿ. ಕನ್ನಡ ಬಂದಿದ್ದಕ್ಕೇ ತೆಲುಗು ಭಾಷೆಯಲ್ಲಿ ನಟಿಸೋದು ಸುಲಭವಾಯಿತು" ಎನ್ನುತ್ತಾಳೆ ಕನ್ನಡ ಪ್ರೇಮಿ ವೇದಿಕಾ!!

ಎನ್.ಕೆ. ಸುಪ್ರಭಾ, ಅನು ಗುಲ್‌ಮೋಹರ್ ಮತ್ತು ರಾಹುಲ್ ಚೌಧುರಿ

 

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .