|

`ಬಡಕಾಯಿ ಅಂಕೋಲೆಡ್ದ್
ತೆನ್‌ಕಾಯಿ ರಾಮೇಶ್ವರ ಮುಟ್ಟ ತುಳುನಾಡು' (ಉತ್ತರದ
ಅಂಕೋಲದಿಂದ ದಕ್ಷಿಣದ ರಾಮೇಶ್ವರವರೆಗೆ ತುಳುನಾಡು) ಎನ್ನುತ್ತವೆ ತುಳು
ಪಾಡ್ದನಗಳು. ತುಳುನಾಡು ಭೌಗೋಳಿಕವಾಗಿ ಪುಟ್ಟದಾದರೂ ಇದರ ಇತಿಹಾಸ ವಿಶಿಷ್ಟ
ಮತ್ತು ಅನನ್ಯ.
ತುಳುನಾಡು ಬೇರೆ ಬೇರೆ ಕಾಲಘಟ್ಟದಲ್ಲಿ
ಬಾರ್ಕೂರಿನಿಂದ ಚಂದ್ರಗಿರಿಯವರೆಗೆ; ಕಾಯ್ಕಿಣಿ ಶಾಸನದ ಪ್ರಕಾರ ತೀರ್ಥಹಳ್ಳಿ,
ಕಳಸದವರೆಗೂ ವ್ಯಾಪಿಸಿತ್ತು. ಆಳುಪ ವಂಶದ ಆಳ್ವಿಕೆಯಲ್ಲಿದ್ದ ತುಳುನಾಡಿಗೆ
'ಒಳವ ಖೇಡ'
ಎಂಬ ಹೆಸರಿದ್ದ ಬಗ್ಗೆಯೂ ಗ್ರೀಕ್ ಪ್ರವಾಸಿ ಟಾಲೆಮಿಯ ದಾಖಲೆಗಳಲ್ಲಿ ವಿವರ
ಸಿಗುತ್ತದೆ. ಜಾನಪದ ವಿದ್ವಾಂಸ ಪುರುಷೋತ್ತಮ ಬಿಳಿಮನೆ ಅವರ ಪ್ರಕಾರ, "ಅಶೋಕನ
ಶಾಸನದಲ್ಲಿ ಉಲ್ಲೇಖಗೊಂಡ 'ಸತಿಯ ಪುತ',
ತಮಿಳಿನ ಸಂಗಂ ಸಾಹಿತ್ಯದಲ್ಲಿ ದೊರೆಯುವ 'ಕೋಶರ್',
ಪಾಡ್ದನಗಳಲ್ಲಿ ಹಾಗೂ ತಮಿಳಿನ ಪ್ರಾಚೀನ ಕೃತಿಗಳಲ್ಲಿ ಕಂಡು ಬರುವ 'ಭೂತಾಳ
ಪಾಂಡ್ಯ' ಇವೆಲ್ಲವುಗಳನ್ನು ಗಮನಿಸಿದರೆ,
ತುಳು ಭಾಷೆಯನ್ನಾಡುವ ಜನ ಸಮುದಾಯ ಕ್ರಿಸ್ತ ಶಕದ ಹಿಂದು-ಮುಂದಿನ ಕಾಲದಲ್ಲಿ
ಇಂದಿನ ಕೇರಳದ ಕಾಸರಗೋಡಿನಿಂದ ಭಟ್ಕಳದ ಸಮೀಪದ ಕಾಸರಗೋಡಿನವರೆಗೆ
ಹರಡಿಕೊಂಡಿತ್ತೆಂದು ಭಾವಿಸಬಹುದು. ಕೋಶರ್ ಅರಸರಿಂದಲೇ 'ಕಾಸರಗೋಡು'
ಪದ ನಿಷ್ಪನ್ನಗೊಂಡಿದೆ ಎಂಬ ವಾದವೂ ಇದೆ. ತುಳು ಭಾಷೆಯು ಪ್ರಾಗ್‌ದ್ರಾವಿಡ
ಭಾಷೆಯಿಂದ ಬೇರೆಯಾಗುವ ಹೊತ್ತಿಗೆ ಆ ಭಾಷೆಯನ್ನಾಡುತ್ತಿದ್ದ ಪ್ರಮುಖ
ಜನವರ್ಗವೆಂದರೆ 'ಕೋಶರ್'.
"ತಮಿಳಿನ ಸಂಗಂ ಕವಿಗಳಂತೂ ಈ ಭಾಗದ 'ಕೋಶರ್'
ರಾಜ ಮನೆತನದ ಜನರನ್ನು 'ಸತ್ಯಸಂಧರೂ, ಒಂದೇ
ಮಾತಿನವರೂ' ಎಂದು ಮತ್ತೆ ಮತ್ತೆ
ಹೊಗಳುತ್ತಾರೆ. ಸಂಗಂ ಕವಿ ಮಾಮೂಲನಾರ್‌ನು 'ಒನ್ರುಮೊಳಿ
ಕೋಶರ್' ಅಂದರೆ 'ಒಂದೇ
ಮಾತಿನ ಕೋಶರ್' ಎಂದು ಮೆಚ್ಚುಗೆಯ
ಮಾತನ್ನಾಡುತ್ತಾನೆ. ಸಾಮ್ರಾಟ್ ಅಶೋಕನಿಗೆ 'ಸತಿಯಪುತ'
ಇಷ್ಟವಾಗಲು ಸತ್ಯವನ್ನು ಪರಿಪಾಲಿಸುವ ಕೋಶರರ ಗುಣವೇ ಕಾರಣವಾಗಿರಬೇಕು. ತುಳು
ಜನರ ಸತ್ಯವಂತಿಕೆ ಪಾಟಲೀಪುತ್ರದವರೆಗೆ ಸುದ್ದಿ ಮಾಡಿತ್ತು ಎಂಬುದರ ಬಗ್ಗೆ
ನಾವು ಹೆಮ್ಮೆ ಪಡಬಹುದಾಗಿದೆ" ಎಂದು ವಿಶ್ಲೇಷಿಸುತ್ತಾರೆ ಪುರುಷೋತ್ತಮ
ಬಿಳಿಮಲೆ.
ತುಳುನಾಡಿಗೆ ಸಂಬಂಧಿಸಿದಂತೆ ಇತಿಹಾಸದ
ತೊಟ್ಟಿಲಾಗಿರುವುದು ಪಾಡ್ದನಗಳು, ಅಜ್ಜಿಕಥೆಗಳು, ಮತ್ತು ಐತಿಹ್ಯಗಳು.
ತುಳುನಾಡಿನ ವ್ಯಾಪ್ತಿ, ಕೋಟಿ-ಚೆನ್ನಯ ಮೊದಲಾಗಿ ಇಲ್ಲಿ ನೆಲೆಸಿದ್ದ ಪ್ರಮುಖ
ವೀರರು, ಸಾಮಾಜಿಕವಾಗಿ ಮಹತ್ವ ಪಡೆದುಕೊಂಡಿದ್ದ ದೇವು ಪೂಂಜಾ ಪ್ರಕರಣಗಳನ್ನು
ಪಾಡ್ದನಗಳಲ್ಲಿ ಕಾಣಬಹುದು. ತುಳುನಾಡಿನಲ್ಲಿ ಕೆಲಸ ಮಾಡುತ್ತಿದ್ದ ಮಿಷನರಿಗಳು
ಮತ್ತು ಕೆಲವು ವಿದ್ವಾಂಸರು ಸಂಗ್ರಹಿಸಿದ ಈ ಜಾನಪದ ಸಂಪತ್ತೇ ಇಂದು ತುಳು
ಪರಂಪರೆಯನ್ನು ವಿವರಿಸುವ ಆಕರ ಸಾಮಗ್ರಿಗಳಾಗಿವೆ. ಬನ್ನಂಜೆ ಗೋವಿಂದಾಚಾರ್ಯರ
ಪ್ರಕಾರ ಪುರಾತನ ತುಳುನಾಡು ಉತ್ತರದ ಗೋಕರ್ಣದಿಂದ ದಕ್ಷಿಣದ ಕಾಸರಗೋಡುವರೆಗೆ
ವ್ಯಾಪಿಸಿತ್ತು.
ಕ್ರಿ.ಶ. 5ನೇ ಶತಮಾನದಲ್ಲಿ ಕದಂಬರು
ಬ್ರಾಹ್ಮಣರನ್ನು ಈ ಪ್ರಾಂತದಲ್ಲಿ ವಾಸಿಸಲು ಆಹ್ವಾನಿಸುವ ಮುನ್ನ ಈ
ಪ್ರಾಂತದಲ್ಲಿ ಭೂತಾರಾಧನೆಯೇ ಪ್ರಮುಖ ಆರಾಧನಾ ಸ್ವರೂಪ. ಬ್ರಾಹ್ಮಣರು
ಇಲ್ಲಿಗೆ ವೈದಿಕ ಸಂಸ್ಕೃತಿಯನ್ನು ಪರಿಚಯಿಸಿದರು. ಹಾಗೇ 13ನೇ ಶತಮಾನದಲ್ಲಿ
ಮಧ್ವಾಚಾರ್ಯರು ಉಡುಪಿ ಕೃಷ್ಣ ದೇವಾಲಯವನ್ನು ಸ್ಥಾಪಿಸುವ ಮೂಲಕ ಅಷ್ಟಮಠಗಳಿಗೆ
ಮುನ್ನುಡಿ ಬರೆದರು. ನಂತರದ ಕಾಲದಲ್ಲಿ ಹಲವಾರು ಜನಾಂಗಗಳು ತುಳುನಾಡಿಗೆ ವಲಸೆ
ಬಂದಿವೆ. ಮಂಗಳೂರು ಪ್ರಮುಖ ಬಂದರಾಗಿದ್ದ ಕಾರಣ ಮಹಾರಾಷ್ಟ್ರದ ಕೊಂಕಣರು
ಮತ್ತು ಅವರ ಬಹಳಷ್ಟು ಉಪವರ್ಗಗಳು, ಗೌಡ ಸಾರಸ್ವತರು ಸಮುದ್ರಮುಖೇನ ಈ
ಪ್ರಾಂತಕ್ಕೆ ವಲಸೆ ಬಂದರು. ಹಾಗೆ ವಲಸೆ ಬಂದ ವರ್ಗಗಳು ತುಳುನಾಡಿನ ರಾಜಕೀಯ,
ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ ಮತ್ತು ಪರಿವರ್ತನೆಯ ಮೂಲವಾಗಿದ್ದಾರೆ.
ಕೋಶರರು, ಕದಂಬರು, ಕದಿರೆಯಲ್ಲಿ ವಾಸವಾಗಿದ್ದ ಬೌದ್ಧರು, ನಾಥರು,
ಕಾರ್ಕಳ-ಮೂಡಬಿದಿರೆಗಳನ್ನಾಳಿದ ಜೈನರು, ಉಡುಪಿಯಲ್ಲಿ ಉದ್ಭವಗೊಂಡ ಮಾಧ್ವರು,
ಮಂಗಳೂರನ್ನು ಬೆಳೆಸಿದ ಕ್ರೈಸ್ತರು, ಶತಮಾನಗಳಿಂದ ಕರಾವಳಿಯ ಬದುಕಿನ
ಭಾಗವಾಗಿರುವ ಮುಸಲ್ಮಾನರು-ಇವರೆಲ್ಲ ತುಳು ಸಂಸ್ಕೃತಿಯನ್ನು ಬೆಳೆಸಿದವರು.
ತುಳುನಾಡಿನ ರಾಜಕೀಯ ಇತಿಹಾಸವನ್ನೊಮ್ಮೆ ಇಣುಕಿ
ನೋಡಿದಾಗ ಆಳುಪ ರಾಜರ ಕಾಲ, ವಿಜಯನಗರ ಸಾಮ್ರಾಜ್ಯ, ಕೆಳದಿ ನಾಯಕರ ಕಾಲ,
ಮೈಸೂರು ಸುಲ್ತಾನರ ಕಾಲದ ತುಳುನಾಡು, ಬ್ರಿಟಿಷ್ ಆಳ್ವಿಕೆ ಮತ್ತು
ಸ್ವಾತಂತ್ರ್ಯೋತ್ತರ ತುಳುನಾಡು ಎನ್ನುವ ಆರು ಹಂತಗಳನ್ನು ಗುರುತಿಸಬಹುದು.
ಕ್ರಿ.ಶ. 7ನೇ ಶತಮಾನದಲ್ಲಿ ಮಂಗಳಪುರ ಆಳುಪರ
ರಾಜಧಾನಿಯಾಗಿತ್ತು. ಒಂದನೇ ಆಳುಪ ಅರಸನಾದ ಗುಣಸಾಗರ ಆಳುಪೇಂದ್ರ
ತುಳುನಾಡನ್ನಷ್ಟೇ ಅಲ್ಲದೆ ಪೊಂಬುಚ್ಚ (ಶಿವಮೊಗ್ಗ ಜಿಲ್ಲೆಯ ಇಂದಿನ ಹುಂಚ)
ಪ್ರದೇಶವೂ ಸೇರಿದಂತೆ ಕದಂಬ ಮಂಡಲ (ಬನವಾಸಿ 12,000)ವನ್ನು ಆಳುತ್ತಿದ್ದ
ಬಗ್ಗೆ ಹಲ್ಮಿಡಿ ಶಾಸನದಲ್ಲಿ ಉಲ್ಲೇಖವಿದೆ. ಪೊಂಬುಚ್ಚ ಪ್ರದೇಶದ
ಪೊಂಬುಚ್ಚಪುರ ಅಥವಾ ಪಟ್ಟಿ ಪೊಂಬುಚ್ಚಪುರ ಮತ್ತು ಕದಂಬಮಂಡಲದ ಬನವಾಸಿ ಇವು
ಆಳುಪರ ಮೂರು ಪ್ರಧಾನ ರಾಜಧಾನಿಗಳಾಗಿದ್ದವು. ಎರಡನೇ ಆಳುಪರಸರ ಕಾಲದಲ್ಲಿ
ಕದಂಬಮಂಡಲ ಕಳೆದು ಹೋಗಿ ಇಂದಿನ ಉಡುಪಿ ತಾಲೂಕಿನ ಉದ್ಯಾವರವು ಉದಯಪುರ ಎಂಬ
ಹೆಸರಲ್ಲಿ ರಾಜಧಾನಿಯಾಗಿತ್ತು. ಉಳಿದಂತೆ ಪೊಂಬುಚ್ಚಪುರ ರಾಜಧಾನಿಯಾಗಿ
ಮುಂದುವರಿದಿತ್ತು. ತುಳು ಆಡು ಭಾಷೆಯಾಗಿ ಮಾತ್ರ ಉಳಿಯಲು ಈ ನಾಡನ್ನು ಆಳಿದ
ರಾಜವಂಶಗಳೂ ಕಾರಣ. ಆದರೆ ಈ ಸಂಬಂಧ ಸ್ಪಷ್ಟ ಕಾರಣಗಳು ಇತಿಹಾಸದಲ್ಲಿ
ಸಿಗುವುದಿಲ್ಲ. "ಆಳುಪ ವಂಶದವರು ಸುಮಾರು 9 ಶತಮಾನಗಳ ಕಾಲ ಆಡಳಿತ ನಡೆಸಿದರೂ
ತುಳುವಿಗೆ ರಾಜಾಶ್ರಯ ದೊರೆತಿರಲಿಲ್ಲ. ಕುಂಬಳೆ ಮೂಲದ ರಾಮಂತರಸರು ಮಾತ್ರ
ತುಳುವಿಗೆ ಪ್ರೋತ್ಸಾಹ ನೀಡಿದ್ದರು. ತುಳು ಕವಿಗಳಿಗೆ ತಮ್ಮ ಆಸ್ಥಾನದಲ್ಲಿ
ಆಶ್ರಯ ನೀಡಿದ್ದರು. ಇದು ಎಷ್ಟು ಪರಿಣಾಮಕಾರಿಯಾಯಿತು ಎಂದರೆ ಈಗ
ತುಳುವಿನಲ್ಲಿ ಸಿಕ್ಕಿರುವಂಥ ಪ್ರಾಚೀನ ತಾಳೆ ಗರಿಯಲ್ಲಿ ಬರೆದಂಥ
ಗ್ರಂಥಗಳೆಲ್ಲಾ ಕಾಸರಗೋಡು ಸೀಮೆಯಲ್ಲಿ ಸಿಕ್ಕಿರುವಂಥದ್ದು. ಹೊರ ಊರಿನವರು
ಕೂಡಾ ಬಂದು ಕಾಸರಗೋಡಿನಲ್ಲಿ ನೆಲೆನಿಂತು ತುಳುವಿನಲ್ಲಿ ಗ್ರಂಥ ಬರೆದಿದ್ದರು
ಎಂಬುದಕ್ಕೂ ಪುರಾವೆ ಇದೆ" ಎನ್ನುತ್ತಾರೆ ತುಳು ಅಕಾಡೆಮಿ ಅಧ್ಯಕ್ಷ ಪಾಲ್ತಾಡಿ
ರಾಮಕೃಷ್ಣ ಆಚಾರ್.
ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ
ಸಾಮ್ರಾಜ್ಯಗಳಲ್ಲಿ ಆಳುಪ ರಾಜರು ಸ್ವತಂತ್ರವಾಗಿ ಆಳ್ವಿಕೆ ನಡೆಸಿದ್ದರು.
"1200-1300 ವರ್ಷಗಳವರೆಗೂ ಆಳ್ವಿಕೆ ನಡೆಸಿದ ಆಳುಪ ರಾಜರ ಕಾಲದಲ್ಲಿ ದೊರೆತ
ಐತಿಹಾಸಿಕ ದಾಖಲೆಗಳ ಪ್ರಕಾರ, ಆ ಕಾಲದಲ್ಲಿ ಆಳುಪ ವಂಶದ ಕನ್ಯೆಯರನ್ನು
ಘಟ್ಟದ ಮೇಲಿನ ರಾಜವಂಶದವರು ಮದುವೆಯಾಗಿದ್ದಿದೆ. ಆ ಕಾಲದಲ್ಲಿ ತುಳುನಾಡಿನ
ವ್ಯಾಪ್ತಿ ಬಾರಕೂರುವರೆಗೆ ಸ್ಪಷ್ಟವಾಗಿತ್ತು. ಆಗ ಬಾರಕೂರು ಹೋಬಳಿ ಮತ್ತು
ಮಂಗಳೂರು ಹೋಬಳಿ ಎಂಬ ಎರಡು ಹೋಬಳಿಗಳಿದ್ದವು. ಆ ಒಂದೊಂದು ಹೋಬಳಿಗೂ ಒಂದೊಂದು
ರಾಜ್ಯಪಾಲ ಇದ್ದ ಬಗ್ಗೆ ಇತಿಹಾಸದ ದಾಖಲೆಗಳು ಸಿಗುತ್ತವೆ" ಎನ್ನುತ್ತಾರೆ
ತುಳು-ಕನ್ನಡ ವಿದ್ವಾಂಸ ಅಮೃತ ಸೋಮೇಶ್ವರ.
ಕ್ರಿ.ಶ. 14ರಿಂದ 17ನೇ ಶತಮಾನದವರೆಗೆ
ವಿಜಯನಗರ ಸಾಮ್ರಾಜ್ಯ ತುಳುನಾಡನ್ನು ಸಂಪೂರ್ಣವಾಗಿ ತಮ್ಮ ತೆಕ್ಕೆಗೆ
ತೆಗೆದುಕೊಳ್ಳುವವರೆಗೂ ಆಳುಪ ರಾಜರ ಸ್ವಾತಂತ್ರ್ಯಕ್ಕೆ ಅಡ್ಡಿ ಬಂದಿರಲಿಲ್ಲ.
ವಿಜಯನಗರ ಕಾಲದಲ್ಲಿ ಸಾಮಂತ ರಾಜವಂಶಗಳು ಬಂಡಾಯವೆದ್ದರೂ ಬಲಾತ್ಕಾರವಾಗಿ
ಅದನ್ನು ನಿಗ್ರಹಿಸಲಾಗಿತ್ತು. ಈ ನಿಟ್ಟಿನಲ್ಲಿ ಮಲೆಯ ದಂಡನಾಯಕರು ಮಹತ್ವದ
ಪಾತ್ರ ವಹಿಸಿದ್ದರು. ಹೀಗಾಗಿ ಕ್ರಿ.ಶ. 1345ರಿಂದ ಸುಮಾರು 250 ವರ್ಷಗಳಿಗೂ
ಹೆಚ್ಚುಕಾಲ ತುಳುನಾಡಿನ ಉನ್ನತಿ ಅಥವಾ ಪತನ, ಶಾಂತಿ ಅಥವಾ ಗೊಂದಲ, ಆರ್ಥಿಕ
ಬೆಳವಣಿಗೆ ಅಥವಾ ಕುಸಿತ ಬಹುಮಟ್ಟಿಗೆ ಸಾಮ್ರಾಜ್ಯದ ರಾಜಕೀಯ, ಆರ್ಥಿಕ ಮತ್ತು
ಸಾಮಾಜಿಕ ಪರಿಸ್ಥಿತಿಗಳನ್ನು ಹೊಂದಿಕೊಂಡಿದ್ದವು. ಇದೇ ಕಾಲದಲ್ಲಿ ವಿಜಯನಗರ
ಸಾಮ್ರಾಜ್ಯದ ಹರಿಹರ-ಬುಕ್ಕರು ತುಳುನಾಡನ್ನು ಸುಸೂತ್ರ ಆಡಳಿತ ದೃಷ್ಟಿಯಿಂದ
ಬಾರಕೂರು ಮತ್ತು ಮಂಗಳೂರು ರಾಜ್ಯಗಳೆಂದು ವಿಂಗಡಿಸಿದರು. ನಂತರ ತುಳುನಾಡು
ಕೆಳದಿ ನಾಯಕರು ಮತ್ತು ಹೈದರ್ ಅಲಿ-ಟಿಪ್ಪು ಸುಲ್ತಾನರ ಆಳ್ವಿಕೆಯಡಿ ಬಂತು.
ಟಿಪ್ಪು ಸುಲ್ತಾನ್ ಹಾಗೂ ಬ್ರಿಟಿಷರ ನಡುವಿನ ಹೋರಾಟದಲ್ಲಿ ಮಂಗಳೂರು ಪ್ರಮುಖ
ಪಾತ್ರ ವಹಿಸಿರುವ ಬಗ್ಗೆ ದಾಖಲೆಗಳಿವೆ. ಕ್ರಿ.ಶ. 1387ರಿಂದ ಕ್ರಿ.ಶ.
1423ರ ವರೆಗೆ ಬಾರಕೂರು ಮತ್ತು ಮಂಗಳೂರು ರಾಜ್ಯಗಳು ಬೇರೆ ಬೇರೆ ರಾಜ್ಯಪಾಲರ
ಆಳ್ವಿಕೆಗೊಳಗಾಗಿದ್ದರೂ ಇಡೀ ತುಳುನಾಡು ಮೇಲ್ವಿಚಾರಣೆ ಮಹಾಪ್ರಧಾನ ಬೈಚಯ್ಯ
ದಂಡನಾಯಕನೆಂಬ ರಾಜಕೀಯ ನಿಪುಣನ ಸುಪರ್ದಿಯಲ್ಲಿತ್ತು. 14ನೇ ಶತಮಾನದ
ಮಧ್ಯಭಾಗದಲ್ಲಿ ಕಳಸ-ಕಾರ್ಕಳ, ಬಂಗವಾಡಿ, ನಗಿರೆ ರಾಜ್ಯಗಳು ದಂಗೆ
ಎದ್ದಿದ್ದವು. ಸಾಳುವ ನರಸಿಂಹನ ಪರಾಕ್ರಮದಿಂದಾಗಿ ಕ್ರಿ.ಶ. 1490ರ ವೇಳೆಗೆ
ದಂಗೆ ಎದ್ದಿದ್ದ ತುಳುನಾಡಿನ ಬಾರಕೂರು ರಾಜ್ಯದ ಬಹುಭಾಗವು ಮತ್ತೊಮ್ಮೆ
ವಿಜಯನಗರ ಸಾಮ್ರಾಜ್ಯವನ್ನು ಸೇರಿಕೊಂಡಿತು. ಕಳಸ-ಕಾರ್ಕಳ ರಾಜ್ಯವನ್ನು
ಭೈರರಸು ಒಡೆಯರು ಆಳುತ್ತಿದ್ದರು. ಕೆಳಗಣ ತುಳುನಾಡಿನ ಕಾರ್ಕಳ ಪ್ರಾಂತ ಇವರ
ಸಂಸ್ಥಾನ.
ಕ್ರಿ.ಶ. 14ನೇ ಶತಮಾನದ ಕೊನೆಯಲ್ಲಿ
ಆರಂಭವಾಗುವ ನಗಿರೆ ರಾಜ್ಯ ಕ್ರಿ.ಶ. 16ನೇ ಶತಮಾನದ ಉತ್ತರಾರ್ಧದವರೆಗೂ ಇತ್ತು.
ಇದರ ನೆರೆ ರಾಜ್ಯ ಹಾಡುವಳ್ಳಿ. ಉತ್ತರ ಕನ್ನಡ ಜಿಲ್ಲೆಯ ದಕ್ಷಿಣ ತುದಿಯ
ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ತುದಿಯ ಪಶ್ಚಿಮ
ಭಾಗಗಳನ್ನೊಳಗೊಂಡಿದ್ದ ಈ ಹಾಡುಹಳ್ಳಿ ರಾಜ್ಯದ ರಾಜಧಾನಿಯನ್ನು ಕನ್ನಡದಲ್ಲಿ
ಹಾಡುವಳ್ಳಿ ಮತ್ತು ಸಂಸ್ಕೃತದಲ್ಲಿ ಸಂಗೀತಪುರ ಎನ್ನಲಾಗಿದೆ. ನಗಿರೆ ರಾಜ್ಯದ
ದೊರೆಗಳಂತೆ ಹಾಡುವಳ್ಳಿ ರಾಜ್ಯದವರೂ ಸಾಳುವ ವಂಶದವರು, ಜೈನಧರ್ಮಾವಲಂಬಿ ಹಾಗೂ
ಅಳಿಯ ಸಂತಾನಕಟ್ಟಿನವರು. ಸ್ನೇಹ ಸಂಬಂಧದಂತೇ ಈ ಎರಡು ಸಂಸ್ಥಾನಗಳ ಚರಿತ್ರೆಯೂ
ಬೆಸೆದುಕೊಂಡಿದೆ.
ಉಳಿದಂತೆ ತುಳುನಾಡಿನ ಅರಸು ಮನೆತನಗಳ ಪೈಕಿ
ಸುರಾಲದ ತೊಳಹರು ಪ್ರಮುಖರು. ಪುಂಜಲಿಯ ರಾಜ್ಯದ ಅಜಿಲರೂ ಸಾಕಷ್ಟು
ಪ್ರಬಲರಾಗಿದ್ದರು. ಕ್ರಿ.ಶ. 1603ರಲ್ಲಿ ವೇಣೂರಿನಲ್ಲಿ ಗುಮ್ಮಟ ವಿಗ್ರಹ
ಸ್ಥಾಪಿಸಿದ್ದು ಇದೇ ರಾಜವಂಶ. ಪರಂಪರಾಗತ ಐತಿಹ್ಯಗಳ ಪ್ರಕಾರ ಈ ಅಜಿಲ
ಮನೆತನವು 12ನೇ ಶತಮಾನದಿಂದಲೇ ಅಸ್ತಿತ್ವದಲ್ಲಿತ್ತು. ವಿಜಯನಗರ
ಸಾಮ್ರಾಜ್ಯದಲ್ಲಿ ಮುಲ್ಕಿಯಲ್ಲಿದ್ದ ಚಿಕ್ಕ ಮನೆತನ ಸಾವಂತರದು. ಅಲ್ಲದೆ,
ಹೊಸಂಗಡಿಯ ಹೊನ್ನೆಯ ಕಂಬಳಿ, ವಿಟ್ಟಲದ ಡೊಂಬ ಹೆಗ್ಗಡೆ, ಕಾಪಿನ ಮದ್ದ
ಹೆಗ್ಗಡೆ, ಎರ್ಮಾಳಿನ ಮಾರಮ್ಮ ಹೆಗ್ಗಡೆ, ಎಲ್ಲೂರಿನ ಕುಂದ ಹೆಗ್ಗಡೆ,
ಕಿನ್ನಿಕ ಹೆಗ್ಗಡೆ ಮೊದಲಾದ ಸ್ಥಳೀಯ ಮನೆತನಗಳು ವಿಜಯನಗರ ಸಾಮ್ರಾಜ್ಯದ
ಅನಂತರದ ಶತಮಾನದಲ್ಲೂ ಆಳ್ವಿಕೆ ನಡೆಸಿದ್ದವು.
ಕ್ರಿ.ಶ. 1505ರಲ್ಲಿ ವಿಜಯನಗರ ಸಿಂಹಾಸನವನ್ನು
ಆಕ್ರಮಿಸಿದ ತುಳುವ ವಂಶದವರು ತುಳುನಾಡಿನವರು ಹೌದೇ ಅಲ್ಲವೇ ಎಂದು
ನಿರ್ಧರಿಸಲು ಸೂಕ್ತ ಶಾಸನಗಳು ದೊರೆತಿಲ್ಲ. ಆದರೆ ತುಳುವ ನರಸನಾಯಕನ ರಾಜಕೀಯ
ಚಟುವಟಿಕೆಗಳ ಪ್ರಾರಂಭ ಕಾಲದ ಶಾಸನಗಳು ತುಳುನಾಡಿನಲ್ಲಿವೆ.
ಸ್ವತಂತ್ರವಾಗಿದ್ದ ಮಂಗಳೂರು ಪ್ರದೇಶ ಕ್ರಿ.ಶ. 1512ರಲ್ಲಿ ಕೃಷ್ಣದೇವರಾಯನ
ಆಳ್ವಿಕೆಯಲ್ಲಿ ಸಾಮ್ರಾಜ್ಯದ ಒಂದು ಭಾಗವಾಯಿತು.
ಅಧ್ಯಯನಗಳ ಪ್ರಕಾರ ಒಂದು ಕಾಲದಲ್ಲಿ ಬಾರಕೂರು
ರಾಜಧಾನಿ ಮತ್ತು ಒಂದು ದೊಡ್ಡ ಬಂದರೂ ಆಗಿತ್ತು! ಹಿಂದೆ ಈ ಪ್ರಾಂತದ ನದಿಗಳ
ಆಳವೂ ಹೆಚ್ಚಾಗಿತ್ತು. ಹಾಗಾಗಿ ಅನೇಕ ನದಿ ಮುಖಜ ಭೂಮಿಗಳು ಬಂದರುಗಳಾಗಿದ್ದವು.
ತುಳುನಾಡಿನಲ್ಲಿ ಕರಾವಳಿ ತೀರದಾದ್ಯಂತ ಹಲವು ಬಂದರುಗಳಿದ್ದವು. ಅವುಗಳಲ್ಲಿ
ದೊಡ್ಡ ರೇವು ಬಂದರುಗಳು ಎಂದರೆ ಮಂಗಳೂರು ಮತ್ತೆ ಮಲ್ಪೆ. ನಂತರ ಹೊನ್ನಾವರ,
ಭಟ್ಕಳ ಕೂಡ. ಹದಿನಾಲ್ಕನೇ ಶತಮಾನದ ಮಧ್ಯ ಅವಧಿಯಲ್ಲಿ ಬಂದ ಆಫ್ರಿಕದ ಮೊರಕ್ಕೊ
ದೇಶದ ಪ್ರವಾಸಿ ಇಬನ್ ಬತೂತ ತನ್ನ ಪ್ರವಾಸದ ಅವಧಿಯಲ್ಲಿ (1333-42)
ತುಳುನಾಡಿನ ಪ್ರಮುಖ ರೇವು ಪಟ್ಟಣಗಳಾದ ಕಾರವಾರ, ಹೊನ್ನಾವರ, ಭಟ್ಕಳ,
ಬಸ್ರೂರು, ಬಾರ್ಕೂರು, ಮಂಗಳೂರು ಇತ್ಯಾದಿಗಳನ್ನು ಸಂದರ್ಶಿಸಿದ ವಿವರ
ನೀಡಿದ್ದಾನೆ. "ನಾನು ಚಿಕ್ಕವನಾಗಿದ್ದಾಗ ನೇತ್ರಾವತಿಯಲ್ಲಿ ಜೆಪ್ಪುವಿನಲ್ಲಿ
ದೋಣಿಯಲ್ಲಿ ಕುಳಿತರೆ ಪಾಣೆ ಮಂಗಳೂರಿನವರೆಗೂ ಪ್ರಯಾಣಿಸಬಹುದಿತ್ತು. ಆದರೆ
ಈಗ ಸಾಧ್ಯವಾಗುತ್ತಿಲ್ಲ. ಬಾರ್ಕೂರು ಖಂಡಿತ ತುಳು ಸಂಸ್ಕೃತಿಯ
ವ್ಯಾಪ್ತಿಯಲ್ಲಿತ್ತು. ಕುಂದಾಪುರದಲ್ಲಿ ಈಗ ಕನ್ನಡವಿದ್ದರೂ ಅಲ್ಲಿ ತುಳು
ಸಂಸ್ಕೃತಿಯ ಗಂಧವಿದ್ದದ್ದು ನಿಜ. ಭೂತಾರಾಧನೆ, ನಾಗಾರಾಧನೆಯೂ ಅಲ್ಲಿ ಬೇರೆ
ರೂಪದಲ್ಲಿದೆ. ಸಾಂಸ್ಕೃತಿಕವಾಗಿ ನೋಡಿದರೆ ಕೋಟ ಕಡೆಯ ಭಾಷೆಯಲ್ಲಿ ತುಳು
ಸಂಸ್ಕೃತಿಯ ಗಂಧ ದಟ್ಟವಾಗಿದೆ. ಅವರ ಶಬ್ದಗಳಲ್ಲೂ ತುಳುವಿನ ಸಾದೃಶ್ಯ
ಕಾಣಬಹುದು. ಒಂದು ಕಾಲದ ದಕ್ಷಿಣ ಕನ್ನಡ ಎಂದರೆ, ನೀಲೇಶ್ವರದವರೆಗೂ ಕಾಸರಗೋಡು
ಜಿಲ್ಲೆಯಿಡೀ ತುಳು ಸಂಸ್ಕೃತಿಯ ವ್ಯಾಪ್ತಿ ಇದ್ದದ್ದಕ್ಕೆ ಬೇರೆ ಬೇರೆ ರೀತಿಯ
ಕುರುಹುಗಳಿವೆ" ಎನ್ನುತ್ತಾರೆ ಅಮೃತ ಸೋಮೇಶ್ವರ.
ಸಾಗರದ ಸ್ಪರ್ಶವಿದ್ದ ಕಾರಣ ತುಳುನಾಡು
ಕ್ರಿ.ಶ. 1ನೇ ಶತಮಾನದಿಂದ ಕ್ರಿ.ಶ. 18ನೇ ಶತಮಾನದವರೆಗೂ ಪ್ರವಾಸಿಗರಿಗೆ
ತೆರೆದುಕೊಂಡಿದ್ದರಲ್ಲಿ ಅಚ್ಚರಿ ಏನಿಲ್ಲ. ಆದರೆ ವಿದೇಶಿ ಪ್ರವಾಸಿಗರು ಬರೆದ
ದಾಖಲೆಗಳಿಂದ ಸ್ಪಷ್ಟ ಇತಿಹಾಸವನ್ನು ಗ್ರಹಿಸುವುದು ಕಷ್ಟವಾಗುತ್ತಿದೆ.
ಪ್ಲಿನಿ, ಟಾಲೆಮಿ, ಕಾಸ್‌ಮಸ್ ಇನ್ನಿತರ ಪ್ರವಾಸಿಗರು ಕೆಲವು ವ್ಯಾಪಾರ
ಕೇಂದ್ರಗಳನ್ನು ಹೆಸರಿಸಿದ್ದಾರೆ. ಆದರೂ ಈಗಿನ ದಕ್ಷಿಣ ಕನ್ನಡ ಜಿಲ್ಲೆಯ
ರೇವುಗಳು ಗ್ರೀಕ್, ರೋಮ್, ಚೀನಾ, ಅರೇಬಿಯ ದೇಶದ ಜೊತೆಗೆ ನಿಕಟ ಸಂಪರ್ಕ
ಹೊಂದಿರುವುದು ಖಚಿತ. ಈಜಿಪ್ಟ್, ಪರ್ಷಿಯಾ ದೇಶಗಳ ಜೊತೆಗೂ ವ್ಯಾಪಾರ
ಸಂಬಂಧವಿತ್ತು. ಅಲ್ಲಿನ ಹಡಗುಗಳು ತುಳುನಾಡಿಗೆ ಬರುವುದು ಸಾಮಾನ್ಯ
ಸಂಗತಿಯಾಗಿತ್ತು. ಗ್ರೀಕ್ ನಾಟಕದಲ್ಲಿ ತುಳುನಾಡಿಗೆ ಸಂಬಂಧಿಸಿದಂತೆ ಪಣಂಬೂರು
ಕಡೆ ನಡೆದ ಒಂದು ಪ್ರಸಂಗ ಬಂದಿರುವುದೂ ಇದಕ್ಕೆ ಸಾಕ್ಷಿ. ಮಂಜು, ಮಚುವೆ,
ಕೋಟಿ, ತಾಂಡಿ ಇತ್ಯಾದಿ ಹೆಸರುಗಳಿರುವ ಅರೇಬಿಯಾ ದೇಶದ ಹಾಯಿ ಹಡಗುಗಳಿದ್ದವು.
"ನಮ್ಮ ಬಾಲ್ಯದಲ್ಲೇ ಅರಬ್ಬಿಗಳು ಸಾಕಷ್ಟು ಸಂಖ್ಯೆಯಲ್ಲಿ ಈ ಪರಿಸರದಲ್ಲಿ
ತಿರುಗಾಡುತ್ತಿದ್ದರು. ಮಹಮ್ಮದ್ ಪೈಗಂಬರ್ ಕಾಲಕ್ಕೂ ಮೊದಲು ಅಂದರೆ,
ಇಸ್ಲಾಂನ ಆವಿರ್ಭಾವಕ್ಕೆ ಮೊದಲೇ ಅರಬ್ಬಿಗಳು ಇಲ್ಲಿಗೆ ಬರುತ್ತಿದ್ದರು. ಹಾಗೆ
ಬಂದವರು ಸ್ಥಳೀಯ ಹುಡುಗಿಯರ ಜೊತೆ ಸಂಬಂಧ ಹೊಂದಿದ ಕಾರಣ ಇಲ್ಲಿ ಒಂದು ಹೊಸ
ಜನಾಂಗದ ನಿರ್ಮಾಣವೂ ಆಗಿದೆ. ಅದನ್ನು ಬ್ಯಾರಿ ಎಂದು ಕರೆಯುತ್ತೇವೆ"
ಎನ್ನುತ್ತಾರೆ ಅಮೃತ ಸೋಮೇಶ್ವರ.
ರಾಜವಂಶಗಳು ಸೊರಗುತ್ತಿರುವ ಕಾಲದಲ್ಲಿ
ವ್ಯವಹಾರ ನಿಮಿತ್ತ ಪಾಶ್ಚಾತ್ಯ ದೇಶಗಳು ಇತ್ತ ಮುಖ ಮಾಡಿದವು. ಬ್ರಿಟಿಷರು
ಮಂಗಳೂರಿಗೆ ಕಾಲಿಡುವ ಮೊದಲೇ ಪೋರ್ಚುಗೀಸರು, ಫ್ರೆಂಚರು, ಡಚ್ಚರ ವಸಾಹತುಗಳು
ಇಲ್ಲಿದ್ದವು. ಕ್ರಿ.ಶ. 15ನೇ ಶತಮಾನದಲ್ಲಿ ಭೇಟಿ ನೀಡಿದ ಪೋರ್ಚುಗೀಸ್
ಪ್ರವಾಸಿಗರಾದ ತೋಂ ಪಿರೇಸ್, ಸೀಜರ್ ಫ್ರೆಡರಿಕ್ ಮತ್ತು ಲಿನ್‌ಕೊಸ್ಟನ್
ಕನ್ನಡ ಕರಾವಳಿಯ ವಾಣಿಜ್ಯ ಸಂಪತ್ತು, ಇವುಗಳ ವ್ಯಾಪಾರ ಮತ್ತು ಇಲ್ಲಿನ ಅಕ್ಕಿ,
ಕರಿಮೆಣಸು ವ್ಯವಹಾರದಲ್ಲಿ ಪೋರ್ಚುಗೀಸರ ವರ್ಚಸ್ಸು ಹಾಗೂ ತುಳುನಾಡು
ಬಂದರುಗಳು ಮತ್ತು ಗುಜರಾತ್, ಗೋವಾ, ಆರ್ಮಜ ಬಂದರುಗಳ ನಡುವಿನ ವ್ಯವಹಾರವನ್ನು
ವಿವರಿಸಿದ್ದಾರೆ. ತುಳುನಾಡಿಗೆ ವ್ಯವಹಾರಕ್ಕಾಗಿ ಬಂದವರಿಗೆ ಯಾವುದೇ ನಿಷೇಧ,
ವಿರೋಧ, ಸಂಘರ್ಷ ತೋರದೆ ನಮ್ಮ ರಾಜರು ಆಶ್ರಯ ಕೊಟ್ಟದ್ದೇ ಅಲ್ಲದೆ, ಕೋಟೆ
ಕಟ್ಟಲು ಅನುವು ಮಾಡಿಕೊಟ್ಟರು. ಅಬ್ಬಕ್ಕ ರಾಣಿಯ ಕಾಲದವರೆಗೂ ಈ ಪ್ರೋತ್ಸಾಹ
ಮುಂದುವರಿದಿತ್ತು. ಆದರೆ ಪೋರ್ಚುಗೀಸರು ಈ ಸ್ವಾತಂತ್ರ್ಯವನ್ನು ದುರುಪಯೋಗ
ಮಾಡಿದ್ದರಿಂದ ಅನಿವಾರ್ಯವಾಗಿ ಅವರ ವಿರುದ್ಧ ಅಬ್ಬಕ್ಕ ಸೆಟೆದು
ನಿಲ್ಲಬೇಕಾಯಿತು. ಹಾಗೆ ನೋಡಿದರೆ ಸ್ವಾತಂತ್ರ್ಯ ಪರವಾಗಿ ಹೋರಾಡಿದ ಪ್ರಥಮ
ಭಾರತೀಯ ಮಹಿಳೆ ಅಬ್ಬಕ್ಕ. ಝಾನ್ಸಿ ಮತ್ತು ಕಿತ್ತೂರು ಚೆನ್ನಮ್ಮನಿಗೆ ದೊರೆತ
ಪ್ರಾಶಸ್ತ್ಯ ಅಬ್ಬಕ್ಕನಿಗೆ ಸಿಗಲಿಲ್ಲ ಎನ್ನುವುದು ನಿಜವೇ. ಆದರೆ ಒಂದು
ಕಾಲದಲ್ಲಿ ದೇಶ-ವಿದೇಶದ ಗಮನ ಸೆಳೆದ ಒಂದು ಪ್ರಕ್ರಿಯೆಯೆಂದರೆ ದೊಡ್ಡ ನೌಕಾ
ಪಡೆಯನ್ನೇ ಹೊಂದಿದ್ದ ಪೋರ್ಚುಗೀಸರನ್ನು ಸೋಲಿಸಿ ಓಡಿಸಿದ ಅಬ್ಬಕ್ಕನ ಪೌರುಷ.
ಆ ಕಾಲದಲ್ಲಿ ಅಬ್ಬಕ್ಕನ ಶೌರ್ಯ-ಸಾಹಸಗಳು ಅರೆಬಿಯ- ಪರ್ಷಿಯಾವರೆಗೂ
ಪ್ರಚಾರದಲ್ಲಿದ್ದುದಕ್ಕೆ ಬೇರೆ ಬೇರೆ ಐತಿಹಾಸಿಕ ದಾಖಲೆಗಳಿವೆ.
18ನೇ ಶತಮಾನದಲ್ಲಿ ಟಿಪ್ಪು ಸುಲ್ತಾನನ
ದಳಪತಿಗಳಲ್ಲಿ ಒಬ್ಬನಾಗಿದ್ದ ದೊಂಡೂ ವಾಘ್ ಪಶ್ಚಿಮದ ದಟ್ಟ ಅರಣ್ಯದಲ್ಲಿ
ಅವಿತು ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧ ಮಾಡಿದ್ದ. ಮಲಬಾರಿನ ಬೆಟ್ಟಗಳ
ತಪ್ಪಲಲ್ಲಿ ಪಯಸ್ಸಿ ರಾಜ ದಂಗೆ ಹೂಡಿ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ
ಮಡಿದ. ಹಾಗೆಯೇ ತಿರುವಾಂಕೂರು ದಿವಾನರಾಗಿದ್ದ ವೇಲುತಂಬಿ, ಸಹ್ಯಾದ್ರಿ
ಬೆಟ್ಟಗಳಲ್ಲಿ ಛಾಪೇಕರ್ ಸಹೋದರರು, ವೀರಪಾಂಡ್ಯ ಕಟ್ಟ ಬೊಮ್ಮನ್ ಬ್ರಿಟಿಷರ
ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದವರು. ಕುಂಬಳೆ, ವಿಟ್ಲ, ನೀಲೇಶ್ವರದ
ರಾಜರುಗಳು ಮಾತ್ರ ಟಿಪ್ಪುವಿನ ಜೊತೆ ಸೇರದೆ ಬ್ರಿಟಿಷರ ಆಶ್ರಯ ಪಡೆದಿದ್ದರು.
ಟಿಪ್ಪು ಕಾಲವಾದ ಮೇಲೆ ಇವರು ಅರಸೊತ್ತಿಗೆಗಳ ಮೇಲಿನ ಹಕ್ಕು ಕಳೆದುಕೊಂಡರೂ
ಸಾಮಾಜಿಕ-ಧಾರ್ಮಿಕ ಕಾರ್ಯಕ್ರಮಗಳಲ್ಲಿ 'ಅರಸು'
ವೈಭವ ಮುಂದುವರಿಯಿತು. 1801ರಲ್ಲಿ ಮದ್ರಾಸ್‌ನ್ನು ಮುಖ್ಯ
ಕಚೇರಿಯನ್ನಾಗಿಸಿಕೊಂಡ ಬ್ರಿಟಿಷರು ತುಳುನಾಡಿನ ಮೇಲೆ ಸಂಪೂರ್ಣ ನಿಯಂತ್ರಣ
ಸಾಧಿಸಿದರು. ಈಗಿನ ದಕ್ಷಿಣ ಕನ್ನಡ ಜಿಲ್ಲೆ 1862ರಲ್ಲಿ ಬ್ರಿಟಿಷರು ಹಾಕಿದ
ಚೌಕಟ್ಟು. ಆದರೆ ಆದಿವಾಸಿಗಳು ಹಲವಾರು ರೂಪದಲ್ಲಿ ಬ್ರಿಟಿಷರ ವಿರುದ್ಧ
ಹೋರಾಟ ಮುಂದುವರಿಸಿದ್ದರು. 'ಕುಮೆರಿ'
ಕೃಷಿ ಕ್ರಮವನ್ನು ನಿಷೇಧಿಸಿದಾಗ, ಭೂಕಂದಾಯ- ತೆರಿಗೆಗಳನ್ನು ಹೆಚ್ಚಿಸಿದಾಗ
ಬಂಡಾಯಗಳು ನಡೆದವು. ಇಂಥ ಹೋರಾಟದ ಚರಿತ್ರೆ ಜಾನಪದ ಕಥೆಗಳಲ್ಲಿ ದಾಖಲಾಗಿವೆ.
ಕೆನರಾ ಬಂಡಾಯ ಎಂದು ಬ್ರಿಟಿಷ್ ದಾಖಲೆಗಳಲ್ಲಿ ಇರುವ 'ಕಲ್ಯಾಣಪ್ಪನ
ಕಟಕಾಯಿ' ಇಂಥ ಬಂಡಾಯಗಳಿಗೆ ಉದಾಹರಣೆ.
ಪುರುಷೋತ್ತಮ ಬಿಳಿಮಲೆ ಅವರ ಪ್ರಕಾರ, "ಪ್ರಸ್ತುತ
ತಲಪಾಡಿಯಿಂದ ದಕ್ಷಿಣ ಭಾಗವು ಕಾಸರಗೋಡಾಗಿ ಕೇರಳಕ್ಕೆ ಸೇರಿ, ಉಳಿದ ತುಳುನಾಡು
ದಕ್ಷಿಣಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಾಗಿ ಒಡೆದಿರುವ ಸ್ಥಿತಿಯಲ್ಲಿ
ತುಳುನಾಡನ್ನು ಒಂದು ಸಾಂಸ್ಕೃತಿಕ ಘಟಕವಾಗಿ ಹೇಗೆ ಸ್ವೀಕರಿಸಬೇಕೆಂಬುದೇ
ಸಂದಿಗ್ಧ. ಜೊತೆಗೆ ತುಳುವರು ಇಂದು ವಿಶ್ವದಾದ್ಯಂತ ಹರಡಿಕೊಂಡಿದ್ದಾರೆ.
ಅದರಲ್ಲೂ ಮುಖ್ಯವಾಗಿ ಮುಂಬೈ ಮಹಾನಗರ ಮತ್ತು ದುಬೈ ತುಳುವರ ಕರ್ಮ
ಭೂಮಿಯಾಗಿದೆ."
20ನೇ ಶತಮಾನದ ವೇಳೆಗೆ ತುಳುನಾಡಿನಲ್ಲಿ ತುಳು
ಸಂಸ್ಕೃತಿ ಅಳಿವಿನಂಚಿನಲ್ಲಿತ್ತು. ತುಳುವಿಗೆ ಲಿಪಿ ಇರುವುದೇ
ತಿಳಿದಿರಲಿಲ್ಲ. ಹಾಗಾಗಿ ಈ ಶತಮಾನವನ್ನು ತುಳುನಾಡಿನ ಸಂಸ್ಕೃತಿ, ಭಾಷೆ,
ಇತಿಹಾಸಗಳ ಪುನರುಜ್ಜೀವನದ ಯುಗ ಎನ್ನಬಹುದೇನೋ. ಗಾಂಧೀಜಿಯವರ ಸ್ವದೇಶಿ
ಚಳವಳಿಯಿಂದ ಪ್ರೇರಿತರಾದ ಶ್ರೀನಿವಾಸ ಉಪಾಧ್ಯ ಪಣಿಯಾಡಿ (1907-1959)
ಬರೋಡಾದಿಂದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಉಡುಪಿಗೆ ಹಿಂತಿರುಗಿ ಸ್ವದೇಶಿ
ಚಳವಳಿಗೆ ಧುಮುಕಿದವರು. ದೇಶೀ ಭಾಷೆಗಳನ್ನು ಸಂಸ್ಕೃತಿಯನ್ನು ಉಳಿಸುವುದು
ಕೂಡಾ ಸ್ವದೇಶಿ ಚಳವಳಿಯೇ ಎಂಬುದು ಅವರ ನಂಬಿಕೆಯಾಗಿತ್ತು. ಹಾಗಾಗಿ ಅವರು
ತುಳು ಸಂಸ್ಕೃತಿ, ಭಾಷೆ, ಸಾಹಿತ್ಯದ ಮೇಲೆ ಕೆಲಸ ಆರಂಭಿಸಿದರು. ಕ್ರಿ.ಶ.
1930ರ ದಶಕದಲ್ಲಿ ತುಳುವಿನ ಪುನರುಜ್ಜೀವನಕ್ಕಾಗಿ ಹೋರಾಡಿದವರಲ್ಲಿ ನಾರಾಯಣ
ಎಸ್. ಕಿಲ್ಲೆ ಅವರೂ ಪ್ರಮುಖರು. ಪಣಿಯಾಡಿ ಮರಣದ ಬಳಿಕ ತುಳು ಚಳವಳಿ
ಕ್ಷೀಣವಾದರೂ ತುಳು ನಾಟಕರಂಗ ಜನಪ್ರಿಯವಾಯಿತು. 20ನೇ ಶತಮಾನದ ಮೊದಲ ಐದು
ದಶಕಗಳಲ್ಲಿ ತುಳುನಾಡಿನ ಇತಿಹಾಸ ಸಂಶೋಧನೆ ಮತ್ತು ಅಧ್ಯಯನಗಳಲ್ಲಿ ತೊಡಗುವ
ಮೂಲಕ ಈ ಪ್ರದೇಶದ ಇತಿಹಾಸ ರಚನೆಗೆ ಅಸ್ತಿಭಾರವನ್ನು ಹಾಕಿದವರಲ್ಲಿ ಪೊಳಲಿ
ಶೀನಪ್ಪ ಹೆಗಡೆ, ಮಂಜೇಶ್ವರ ಗಣಪತಿ ಐ, ಮಂಜೇಶ್ವರ ಗೋವಿಂದ ಪೈ, ಭಾಸ್ಕರ
ಆನಂದ ಸಾಲೆತ್ತೂರು ಮತ್ತು ಕಾರ್ಕಳ ಕೇಶವ ಕುಡ್ವ ಅಗ್ರಮಾನ್ಯರು.
1947ರಲ್ಲಿ ಭಾರತ ಸ್ವತಂತ್ರವಾದಾಗ ತುಳುನಾಡು
ಮದ್ರಾಸ್ ರಾಜ್ಯದ ಅಂಗವಾಯಿತು. ಭಾಷಾವಾರು ವಿಂಗಡನೆ ನಡೆದ ಮೇಲೆ
ಕರ್ನಾಟಕಕ್ಕೆ ಸೇರಿತು. ನಂತರ 1970ರಲ್ಲಿ ತುಳು ಸಂಸ್ಕೃತಿಗೆ ಶೈಕ್ಷಣಿಕ
ವಲಯಗಳಲ್ಲಿ ಮನ್ನಣೆ ಸಿಕ್ಕಿತು. ಮಂಗಳೂರು ಆಕಾಶವಾಣಿ ತುಳು ಕಾರ್ಯಕ್ರಮ
ಪ್ರಸಾರ ಮಾಡುವ ಮೂಲಕ ಭಾಷೆಗೆ ಅಧಿಕೃತ ಮನ್ನಣೆಯೂ ದೊರೆತಂತಾಯಿತು.
1994ರಲ್ಲಿ ತುಳು ಸಾಹಿತ್ಯ ಅಕಾಡೆಮಿ ಹುಟ್ಟಿಕೊಂಡ ಬಳಿಕ ತುಳುನಾಡು,
ಸಂಸ್ಕೃತಿ ಮತ್ತು ಭಾಷೆಯ ಕುರಿತಂತೆ ಜನಜಾಗೃತಿ ಮೂಡಿದೆ. ತುಳುನಾಡಿನ
ಸಾಂಸ್ಕೃತಿಕ ಇತಿಹಾಸದ ಮೈಲಿಗಲ್ಲು 1997; ತುಳು ನಿಘಂಟು ಸಿದ್ಧವಾದ ವರ್ಷವದು.
ಇಷ್ಟೆಲ್ಲ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಯಶೋಗಾಥೆಗಳು, ಸಮಸ್ಯೆಗಳು
ಮತ್ತು ಬಿಕ್ಕಟ್ಟುಗಳನ್ನು ಎದುರಿಸಿದರೂ ಸಾಮರಸ್ಯವೇ ತುಳುನಾಡಿನ ಪ್ರಧಾನ
ಸೂತ್ರ. ಇಸ್ಲಾಂ ಮತ್ತು ಕ್ರೈಸ್ತ ಧರ್ಮ ಬಹಳ ಅನ್ಯೋನ್ಯತೆಯಿಂದ ಈ
ಪರಿಸರದಲ್ಲಿ ಬೆಳೆದಿರುವುದನ್ನು ಬೇರೆ ಬೇರೆ ನೆಲೆಗಳಲ್ಲಿ ನಾವು ಕಾಣುತ್ತೇವೆ.
ಆದರೆ ಇತ್ತೀಚೆಗೆ ತುಳುನಾಡು ಪರಿಸರದಲ್ಲಿ ಕೋಮು ಘರ್ಷಣೆಗಳು
ಸಾಮಾನ್ಯವಾಗುತ್ತಿವೆ. "ನಮ್ಮ ಮಾತೃಭಾಷೆಯ ಮೇಲೆ ಅಕ್ಕರೆ, ಪ್ರೀತಿ ಇರಬೇಕು.
ಹಾಗೆಯೇ ಅದಕ್ಕೆ ಸಮನಾದ ಇನ್ನೊಂದು ಭಾಷೆ ಮೇಲೂ ಅಷ್ಟೇ ಗೌರವವಿರಬೇಕು.
ವಿಶಾಲ ಮನೋಭಾವನೆ ಇದ್ದರೆ ಮಾತ್ರ ಈ ದೇಶದ ಸೌಹಾರ್ದತೆಯನ್ನು ನಾವು
ಕಾಪಾಡಿಕೊಂಡು ಬರಬಹುದು. ಮತೀಯ ಗುರುಗಳು, ನಾಯಕರು ನಮ್ಮನ್ನು ಒಂದಾಗಿಸಬೇಕು"
ಎನ್ನುತ್ತಾರೆ ಆಳ್ವಾಸ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಮೋಹನ್ ಆಳ್ವ.
ಕೋಮು ಗಲಭೆ ಮಾತ್ರವಲ್ಲ, ನಕ್ಸಲ್ ಸಮಸ್ಯೆ
ತುಳುನಾಡಿಗೂ ಹಬ್ಬಿದೆ. ಒಟ್ಟಿನಲ್ಲಿ ಇತ್ತೀಚೆಗಿನ ದಶಕದಲ್ಲಿ ತುಳುನಾಡು
ಅತಂತ್ರಗಳು, ಬಿಕ್ಕಟ್ಟು ಮತ್ತು ಸಂಘರ್ಷಗಳ ಕೂಪವಾಗುತ್ತಿದೆ.
ಬದಲಾಗುತ್ತಿರುವ ಆರ್ಥಿಕ-ಸಾಮಾಜಿಕ-ರಾಜಕೀಯ ಸಮೀಕರಣಗಳು ತುಳುವರ
ಸಾಮರಸ್ಯಕ್ಕೆ ಕೊಡಲಿ ಏಟು ನೀಡಿವೆ. ಆದರೆ ಎಲ್ಲರನ್ನೂ ಒಂದಾಗಿ ಬಂಧಿಸುವ
ಸೂತ್ರ ತುಳುನಾಡಿನ ಸಂಸ್ಕೃತಿ ಆಗಲಿದೆಯೆ?
ಬ್ಯಾರಿ-ತುಳುವ ಭಾಯಿ
ಭಾಯಿ
ಕರಾವಳಿ ತೀರಕ್ಕೂ ಅರಬ್ಬರಿಗೂ ಹಿಂದಿನಿಂದಲೇ
ಭಾರೀ ನಂಟಿದ್ದ ಕಾರಣ ಕರಾವಳಿಯಲ್ಲಿದ್ದ ಸ್ಥಳೀಯರ ಹುಡುಗಿಯರನ್ನು ಅರಬ್ಬರು
ಮದುವೆಯಾಗಿ ಅವರಿಂದ ಹುಟ್ಟಿದ ಜನಾಂಗವೇ ಬ್ಯಾರಿಗಳು ಎಂಬ ಪ್ರತೀತಿ ಇದೆ.
ಬ್ಯಾರಿಗಳನ್ನು ಹೊರಗಿಟ್ಟು ತುಳುನಾಡಿನ ವೈಶಿಷ್ಟ್ಯ ಪಟ್ಟಿ ಮಾಡುವುದು
ಮೂರ್ಖತನವೇ ಸರಿ. ಎಲ್ಲರೊಳಗೊಂದಾಗಿ, ಮನೆಯಲ್ಲಿ ಬ್ಯಾರಿ ಭಾಷೆ ಮಾತನಾಡುತ್ತಾ
ಹೊರಗೆ ನಿರರ್ಗಳವಾಗಿ ತುಳು ಹರಟುತ್ತಾ ಬಿಳಿ ಅಂಗಿ, ಮುಕ್ಕಾಲು ಬಿಳಿ ಪಂಚೆ
ತಲೆಯ ಮೇಲೆ ಇಸ್ಲಾಂ ಟೋಪಿ ಧರಿಸುವ ಇವರು ಈ ಜಿಲ್ಲೆಯ ಅವಿಭಾಜ್ಯ ಅಂಗ.
ಮೊಗವೀರರು ಮೀನು ಹಿಡಿದರೆ ಅದನ್ನು ಮನೆ ಮನೆಗೆ ಸಾಗಿಸುವ ಕಾರ್ಯ
ಬ್ಯಾರಿಗಳದ್ದು. ಕೋಮುಗಲಭೆ ಸದ್ದಿನ ನಡುವೆಯೂ ಮುಂದುವರಿಯುತ್ತಿರುವ
ತುಳುವ-ಬ್ಯಾರಿ ಸಾಮರಸ್ಯ ಈ ಜಿಲ್ಲೆಯ ವಿಶೇಷ.
ವಿಭಜನೆಯಲ್ಲೂ ಒಗ್ಗಟ್ಟು
ಈಗಿನ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಹಾಗೂ
ಕಾಸರಗೋಡು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಾಗಗಳು. 1997ರಲ್ಲಿ ಉಡುಪಿ
ಪ್ರತ್ಯೇಕ ಜಿಲ್ಲೆಯಾಗಿ, ಕಾಸರಗೋಡು ಕೇರಳ ರಾಜ್ಯಕ್ಕೆ ಸೇರಿ ಭೌಗೋಳಿಕವಾಗಿ
ದಕ್ಷಿಣ ಕನ್ನಡ ಮೂರು ಭಾಗವಾಗಿ ಹರಿದು ಹಂಚಿ ಹೋದರೂ ಜನ ಮಾನಸದಲ್ಲಿ ಸಣ್ಣ
ಬಿರುಕೂ ಮೂಡಿಲ್ಲ!
ಟಿಎಸ್‌ಐ |